
ಇತ್ತೀಚಿನ ದಿನಗಳಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಸ್ವಂತದವರೇ ಮನೆಯವರಿಗೆ ಮೋಸ ಮಾಡಿರುವ ಉದಾಹರಣೆಗಳಿವೆ. ಇದೀಗ ಮಹಿಳೆಯೊಬ್ಬರು ತನ್ನ ಪರಿಚಯಸ್ಥರ ಮನೆಯಲ್ಲೇ ಕಳ್ಳತನ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಈ ಘಟನೆ ಬೆಳಕಿಗೆ ಬಂದಿದ್ದು ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಪೊಲೀಸರು ಕಳ್ಳರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸಹ ಕೆಲವರು ತಮ್ಮ ಚಾಳಿಯನ್ನು ಬಿಡದೇ ಕಳ್ಳತನಕ್ಕೆ ಇಳಿಯುತ್ತಿದ್ದಾರೆ. ಇದೀಗ ಸಣ್ಣ ನಗರಗಳಲ್ಲೂ ಕಳ್ಳತನ ಪ್ರಕರಣಗಳೂ ಹೆಚ್ಚಾಗಿದೆ. ಇದಕ್ಕೆ ಸೂಕ್ತ ಉದಾಹರಣೆಯೇ ಚಾಮರಾಜನಗರದಲ್ಲಿ ನಡೆದಿರುವ ಘಟನೆ. ಪರಿಚಯಸ್ಥ ಮಹಿಳೆಯೊಬ್ಬರು ವೃದ್ಧೆಯ ಮನೆಯಲ್ಲಿ ಚಿನ್ನ ಕಳ್ಳತನ ಮಾಡಿರುವ ಘಟನೆ ಚಾಮರಾಜನಗರ ಪಟ್ಟಣದ ಶಂಕರಪುರ ಬಡಾವಣೆಯಲ್ಲಿ ನಡೆದಿದೆ.

ಇನ್ನು ಮಹಿಳೆಯ ಕಳ್ಳತನ ಸಿ.ಸಿ.ಟಿ.ವಿ.ಯಿಂದ ಬಹಿರಂಗವಾಗಿದೆ. ಕಾರಿನ ಹಿಂಭಾಗ ನಿಂತು ಕಳ್ಳಬೆಕ್ಕಿನ ರೀತಿಯಲ್ಲಿ ಹೊಂಚು ಹಾಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ದೂರಿನ ಅನ್ವಯ ಪೊಲೀಸರು ಸಿ.ಸಿ.ಟಿ.ವಿಯಲ್ಲಿ ಪರಿಶೀಲನೆ ನಡೆಸಿದ್ದರು. ಆ ವೇಳೆ ಅಜ್ಜಿಯ ಪರಿಚಯಸ್ಥ ಮಹಿಳೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಕಳ್ಳತನ ಮಾಡಿದ ಮಹಿಳೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.