
IPL 2025 BCCI Income – ಐಪಿಎಲ್ ಎಂದ ಮೇಲೆ ಹಣದ ಹೊಳೆ ಹರಿದೇ ಹರಿಯುತ್ತದೆ. ಇದೀಗ ಅತ್ಯಂತ ಜನಪ್ರಿಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2025ರ ಪ್ರಶಸ್ತಿ ಗೆದ್ದಿರುವುದರಿಂದ ಬಿಸಿಸಿಐ (BCCI) ದೊಡ್ಡ ಮೊತ್ತವನ್ನೇ ಜೇಬಿಗಿಳಿಸಿಕೊಂಡಿದೆ. ಪ್ರಸಾರ ಹಕ್ಕುಗಳು, ಪ್ರಾಯೋಜಕತ್ವ ಮತ್ತು ಟಿಕೆಟ್ ಮಾರಾಟದಿಂದ ಹೆಚ್ಚಿನ ಆದಾಯ ಗಳಿಸಿದೆ. ಟಾಟಾ ಗ್ರೂಪ್ ಸಹ ಪ್ರಾಯೋಜಕತ್ವವನ್ನು ವಿಸ್ತರಿಸಿದೆ.

j3tvkannada.in
ಹಾಗಿದ್ದರೆ ಈ ಬಾರಿ ಹರಿದು ಬಂದಿರುವ ಹಣವೆಷ್ಟು? ಇಲ್ಲಿದೆ ಲೆಕ್ಕಾಚಾರ. ಐಪಿಎಲ್ ನ ಅತ್ಯಂತ ಜನಪ್ರಿಯ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಮೊದಲ ಬಾರಿ IPL 2025 ಅನ್ನು ಗೆದ್ದುಕೊಂಡಿರುವುದು ಬಿಸಿಸಿಐಗೆ ಭರ್ಜರಿ ಲಾಭವನ್ನೇ ತಂದಿತ್ತಿದೆ. ಈ ಲೀಗ್ನಿಂದ ಬಿಸಿಸಿಐಗೆ (BCCI) ಬಹಳಷ್ಟು ಹಣ ಬಂದಿದೆ. ಪ್ರಸಾರ ಹಕ್ಕು, ಪ್ರಾಯೋಜಕತ್ವ ಮತ್ತು ಟಿಕೆಟ್ ಮಾರಾಟದಿಂದ ಬಿಸಿಸಿಐ ಭರ್ಜರಿ ಆದಾಯ ಸಿಕ್ಕಿದೆ. ಬಿಸಿಸಿಐಗೆ ಒಟ್ಟಾರೆ 2024-25ರಲ್ಲಿ 20,686 ಕೋಟಿ ರೂಪಾಯಿ ಆದಾಯ ಬಂದಿದೆ. 2023-24 ರಲ್ಲಿ ಬಿಸಿಸಿಐ 16,493 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿತ್ತು. ಅಂದರೆ ಈ ಬಾರಿ ಆದಾಯ 4,193 ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ.
ಪ್ರತಿ ಪಂದ್ಯದಿಂದ 130 ಕೋಟಿ ಲಾಭ !
ಇನ್ನು IPL 2025 ರಲ್ಲಿ ಬಿಸಿಸಿಐಗೆ ಹರಿದು ಬಂದಿರುವ ಹಣದ ಲೆಕ್ಕಾಚಾರವನ್ನು ಬಿಡಿಬಿಡಿಯಾಗಿ ನೋಡುವುದಾದಲ್ಲಿ ಪ್ರಸಾರ ಹಕ್ಕಿನಿಂದ 9,678 ಕೋಟಿ ರೂಪಾಯಿ ಸಿಕ್ಕಿದೆ. ಅಂದರೆ ಪ್ರತಿ ಪಂದ್ಯಕ್ಕೆ ಸುಮಾರು 130.7 ಕೋಟಿ ರೂಪಾಯಿ. ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಬೇರೆ ಬೇರೆಯಾಗಿ ಮಾರಾಟ ಮಾಡಿದ್ದರಿಂದ ಆದಾಯ ಹೆಚ್ಚಾಗಿದೆ. ಸ್ಟಾರ್ ಸ್ಪೋರ್ಟ್ಸ್ ಟಿವಿ ಹಕ್ಕುಗಳನ್ನು ತೆಗೆದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ವಯಾಕಾಮ್ 18 ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ.
ಏತನ್ಮಧ್ಯೆ ಟಾಟಾ ಗ್ರೂಪ್ IPL ನ ಪ್ರಾಯೋಜಕತ್ವವನ್ನು 2024 ರಿಂದ 2028 ರವರೆಗೆ ಐದು ವರ್ಷಗಳವರೆಗೆ ವಿಸ್ತರಿಸಿದೆ. ಇದಕ್ಕಾಗಿ 2,500 ಕೋಟಿ ರೂಪಾಯಿ ನೀಡಿದೆ. ಅಂದರೆ ಪ್ರತಿ ವರ್ಷ ಸುಮಾರು 500 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತ ಸಿಗುತ್ತದೆ. My11Circle, Angel One, RuPay ಸಹ ಪ್ರಾಯೋಜಕರಾಗಿದ್ದಾರೆ. CEAT ಸ್ಟ್ರಾಟೆಜಿಕ್ ಟೈಮ್ಔಟ್ ಪಾಲುದಾರರಾಗಿದ್ದರೆ, ವಂಡರ್ ಸಿಮೆಂಟ್ ಅಧಿಕೃತ ಅಂಪೈರ್ ಪಾಲುದಾರರಾಗಿದ್ದಾರೆ. ಅರಾಮ್ಕೊ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಪಾಲುದಾರರಾಗಿದ್ದಾರೆ.
ಟಿಕೆಟ್ ಮಾರಾಟದಿಂದ ಎಷ್ಟು?
ಟಿಕೆಟ್ ಮಾರಾಟದಿಂದಲೂ ಹಣ ಬರುತ್ತದೆ. ಬಿಸಿಸಿಐಗೆ ಕೇಂದ್ರ ಪ್ರಾಯೋಜಕತ್ವ ಮತ್ತು ಟಿಕೆಟ್ ಆದಾಯದ 20% ಸಿಗುತ್ತದೆ. ಪ್ರತಿ ತಂಡದಿಂದ ಪರವಾನಗಿ ಆದಾಯದ 12.5% ಬರುತ್ತದೆ. ಉಳಿದ ಹಣವನ್ನು ಫ್ರಾಂಚೈಸಿಗಳಿಗೆ ಹಂಚಲಾಗುತ್ತದೆ. ಬಿಸಿಸಿಐ ಪ್ರತಿ ತಂಡಕ್ಕೆ 425 ಕೋಟಿ ರೂಪಾಯಿಗಳನ್ನು ನೀಡುತ್ತದೆ. ಇದು ಆದಾಯ ಹಂಚಿಕೆಯ ಒಂದು ಭಾಗ. “ಬಿಸಿಸಿಐಗೆ ಕೇಂದ್ರ, ಪ್ರಾಯೋಜಕತ್ವ ಮತ್ತು ಟಿಕೆಟ್ ಆದಾಯದ 20% ಸಿಗುತ್ತದೆ. ಪ್ರತಿ ತಂಡದಿಂದ ಪರವಾನಗಿ ಆದಾಯದ 12.5% ಬರುತ್ತದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂದರೆ, ಬಿಸಿಸಿಐಗೆ ಬೇರೆ ಬೇರೆ ಮೂಲಗಳಿಂದ ಸಾಕಷ್ಟು ಆದಾಯ ಬರುತ್ತದೆ. ಈ ಬಾರಿಯಂತೂ ಆರ್ ಸಿಬಿ ತಂಡದ ಗೆಲುವು ಅದರ ಆದಾಯವನ್ನು ಮತ್ತಷ್ಟು ಹೆಚ್ಚಿಸಿದೆ.
IPL ಕೇವಲ ಒಂದು ಕ್ರಿಕೆಟ್ ಲೀಗ್ ಅಲ್ಲ. ಇದು ಬಿಸಿಸಿಐಗೆ ದೊಡ್ಡ ಆದಾಯದ ಮೂಲ. ಪ್ರಸಾರ ಹಕ್ಕುಗಳು, ಪ್ರಾಯೋಜಕತ್ವ ಮತ್ತು ಟಿಕೆಟ್ ಮಾರಾಟದಿಂದ ಬರುವ ಹಣವು ಬಿಸಿಸಿಐ ಅನ್ನು ಮತ್ತಷ್ಟು ಶ್ರೀಮಂತ ಕ್ರಿಕೆಟ್ ಮಂಡಳಿಯನ್ನಾಗಿ ಮಾಡಿದೆ. RCB ಗೆದ್ದಿರುವುದು ಒಂದು ಕಡೆಯಾದರೆ, ಬಿಸಿಸಿಐ ಗಳಿಸಿರುವುದು ಇನ್ನೊಂದು ಕಡೆ. ಒಟ್ಟಿನಲ್ಲಿ IPL ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಲಾಭ ಹೊಂದಿರುವ ಚುಟುಕು ಕ್ರಿಕೆಟ್ ಹಬ್ಬವಾಗಿದೆ. ಜೂನ್ 3ರಂದು ಅಹ್ಮದಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯಶಾಲಿಯಾಯಿತು.