
ಮೈಸೂರು:ನಿವೃತ್ತ ಹಿರಿಯ ಪೊಲೀಸ್ ಆಧಿಕಾರಿ ಭಾಸ್ಕರ್ ರಾವ್ ಅವರು ಸಿದ್ದರಾಮಯ್ಯ ಅವರನ್ನು ಹೇಡಿ, ವೀಕ್, ಅಸಹಾಯಕ ಮುಖ್ಯಮಂತ್ರಿ ಎಂದು ಜರಿದಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಹಿರಿಯ ಪೊಲೀಸ್ ಆಧಿಕಾರಿ ಭಾಸ್ಕರ್ ರಾವ್ ಮೈಸೂರಿನಲ್ಲಿ ಮಾತನಾಡಿ, ಸಿದ್ದರಾಮಯ್ಯನವರು ಮೊದಲ ಅವಧಿಯಲ್ಲಿ ಬಹಳ ಸ್ಟ್ರಾಂಗ್ ಇದ್ದರು. ಈಗ ಸಂಪೂರ್ಣವಾಗಿ ಕಳೆದು ಹೋಗಿದ್ದಾರೆ. ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮತ್ತು ಪರಮೇಶ್ವರ್ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಿದೆ. ತಪ್ಪು ಮಾಡಿರುವವರೇ ಇವರು ಎಂದು ಹೇಳಿದ್ದಾರೆ.

ಪೊಲೀಸ್ ಇಲಾಖೆಯನ್ನೇ ಕಗ್ಗೊಲೆ ಮಾಡಿದ್ದಾರೆ
ಕೇಂದ್ರ ಸರ್ಕಾರ ಕೊಟ್ಟ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಇದು ದಯಾನಂದ್ ಅವರಿಗೆ ಸೀಮಿತವಾದ ವಿಚಾರವಲ್ಲ. ಇಡೀ ಪೊಲೀಸ್ ಇಲಾಖೆಯನ್ನು ಕಗ್ಗೊಲೆ ಮಾಡಿದಂತೆ. ಪೊಲೀಸರ ನೈತಿಕ ಸ್ಥೈರ್ಯವನ್ನೇ ಸಿದ್ದರಾಮಯ್ಯ ಕುಗ್ಗಿಸಿದ್ದಾರೆ. ಹೀಗೆ ಎಷ್ಟು ಜನರ ಮೇಲೆ ಕ್ರಮ ತೆಗೆದುಕೊಳ್ಳುತ್ತಾ ಹೋಗುತ್ತೀರಾ.? ತೀರಾ ಅವಮಾನಕರ ರೀತಿಯಲ್ಲಿ ದಯಾನಂದ್ ಅವರನ್ನ ನಡೆಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಅವರ ಮೇಲೆ ನಿಮಗೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು, ಕಡ್ಡಾಯ ರಜೆಯ ಮೇಲೆ ಕಳುಹಿಸಬಹುದಿತ್ತು. ಅದನ್ನು ಬಿಟ್ಟು ಅಮಾನತು ಮಾಡಿದ್ದು ಸರಿಯಲ್ಲ. ಐಪಿಎಲ್ ಏನು ರಾಜ್ಯ ಮತ್ತು ದೇಶದ ಪಂದ್ಯಾವಳಿನಾ? ಅದೊಂದು ಕ್ಲಬ್ ಪಂದ್ಯ ಅಷ್ಟೇ.
ಅದಕ್ಕೆ ಡಿ ಕೆ ಶಿವಕುಮಾರ್ ಹೋಗಿದ್ದೇನು, ಮುತ್ತಿಕ್ಕಿದ್ದೇನು, ಬಾವುಟ ಹಿಡಿದಿದ್ದೇನು. ಇದೆಲ್ಲಾ ಮುಖ್ಯಮಂತ್ರಿಗೆ ಗೊತ್ತಾಗಲಿಲ್ವಾ. ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಬಿಗಿಯಾಗಿದ್ದರೆ ಈ ಸಿಎಂ, ಡಿಸಿಎಂ, ಗೃಹ ಸಚಿವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು. ಯಾವುದೋ ಆಫ್ರಿಕಾ ದೇಶದಲ್ಲಿ ಹೆಣಗಳನ್ನು ಹೊತ್ತುಕೊಂಡು ಹೋದ ರೀತಿಯಲ್ಲಿ ಬೆಂಗಳೂರಿನಲ್ಲೂ ಹೊತ್ತುಕೊಂಡು ಹೋಗಲಾಗಿದೆ ಎಂದು ಭಾಸ್ಕರ್ ರಾವ್ ಮೈಸೂರಿನಲ್ಲಿ ಕಿಡಿಕಾರಿದ್ದಾರೆ.
ಕಮಿಷನರ್ ಹುದ್ದೆಯಿಂದ ದಯಾನಂದ್ ಅಮಾನತು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದ ಕಾರಣ ನೀಡಿ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ ಅವರನ್ನು ಅಮಾನತುಗೊಳಿಸಿದ ರಾಜ್ಯ ಸರಕಾರದ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಪೊಲೀಸ್ ಇಲಾಖೆ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಸರಕಾರದ ತೀರ್ಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ಪ್ರಾಮಾಣಿಕತೆಗೆ ಸರಕಾರ ನೀಡಿದ ಉಡುಗೊರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ‘ಐ ಸ್ಟ್ಯಾಂಡ್ ಫಾರ್ ದಯಾನಂದ್’ ಪೋಸ್ಟರ್ಗಳನ್ನು ಹಂಚಿಕೊಂಡು ದಯಾನಂದ್ ಅವರ ಪರ ಜನರು ನಿಂತಿದ್ದಾರೆ.