
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿ ರಾಜ್ಯ ಮಾನವ ಹಕ್ಕುಗಳ ಆಯೋಗ, ಎರಡು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದು, ನಗರ ಪೊಲೀಸ್ ಕಮಿಷನರ್, ಕೆಎಸ್ಸಿಎ ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ನೀಡಿದೆ. ಕಾಲ್ತುಳಿತದಲ್ಲಿ 11 ಆರ್ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಂ ಭಟ್, ಸದಸ್ಯ ಸುರೇಶ್, ಡಿವೈಎಸ್ಪಿಗಳಾದ ಸುಧೀರ್ ಹೆಗ್ಡೆ, ಮೋಹನ್ ನೇತೃತ್ವದ ನಿಯೋಗ ಭೇಟಿ ನೀಡಿ, ಪರಿಶೀಲಿಸಿದೆ.

j3tvkannada.in
ಮಾನವ ಹಕ್ಕುಗಳ ಆಯೋಗದಿಂದ 2 ಕೇಸ್ ದಾಖಲಿಸಿಕೊಂಡಿದ್ದೇವೆ. ಬೆಂಗಳೂರು ಪೊಲೀಸ್ ಕಮಿಷನರ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಮತ್ತು ಕ್ರೀಡಾಂಗಣದವರ ಮೇಲೆ ಸುಮೋಟೋ ಕೇಸ್ ದಾಖಲು ಮಾಡಿದ್ದೇವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಂ ಭಟ್ ತಿಳಿಸಿದ್ದಾರೆ.
ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಂ ಭಟ್ ಅವರು, ಕಾಲ್ತುಳಿತದಿಂದ 11 ಜನ ಮೃತಪಟ್ಟಿದ್ದು,70 ಜನ ಗಾಯಗೊಂಡಿದ್ದಾರೆ. ಬೌರಿಂಗ್ ಮತ್ತು ವೈದೇಹಿಯಲ್ಲಿ ತಲಾ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂಬ್ಯುಲೆನ್ಸ್ ಇರಲಿಲ್ಲ, ಸರಿಯಾದ ಸಮಯಕ್ಕೆ ಗೇಟ್ ತೆಗೆದಿಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದರು.
ಮೃತರ ಕುಟುಂಬಕ್ಕೆ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಸರ್ಕಾರ ಹೇಳಿದೆ. ಹೆಚ್ಚಿನ ಪರಿಹಾರ ಏನಾದರೂ ಬೇಕಾಗಿದ್ದರೆ ನಾವು ಸರ್ಕಾರಕ್ಕೆ ತಿಳಿಸುತ್ತೇವೆ. ನ್ಯಾಯಾಲಯ ಸೂಚನೆ ಕೊಟ್ಟರೆ ಆಯೋಗದಿಂದ ತನಿಖೆ ಮಾಡಿಸುತ್ತೇವೆ ಎಂದರು.