
ಚಿಕ್ಕೋಡಿ: ಉತ್ತರ ಕರ್ನಾಟಕದಲ್ಲಿ ಬಿರು ಬಿಸಿಲಿನ ಆರ್ಭಟ ಶುರುವಾಗಿದ್ದು ಚಿಕ್ಕೋಡಿ ಭಾಗದ ಜನರು ಬಿಸಿಲಿನ ಝಳಕ್ಕೆ ಹೈರಾಣಾಗಿದ್ದಾರೆ. ಕಳೆದ ಬಾರಿಗಿಂತಲೂ ಹೆಚ್ಚಿನ ತಾಪಮಾನ ಏರಿಕೆಯಾಗಿದ್ದು, ಜನರು ಬಿಸಿಲಿನ ಬೇಗೆಗೆ ಬೇಸತ್ತು ಹೋಗಿದ್ದಾರೆ.
ಬಿಸಿಲು ಜಿಲ್ಲೆಗಳಿಗಿಂತ ತಂಪಾಗಿರುತ್ತಿದ್ದ ಬೆಳಗಾವಿ ಜಿಲ್ಲೆಯಲ್ಲಿ ಮಾರ್ಚ್ ಆರಂಭದಲ್ಲೇ ಜನರು ಬಿಸಿಲಿಗೆ ಹೈರಾಣಾಗಿದ್ದಾರೆ. ಸಾಮಾನ್ಯವಾಗಿ ಮಾರ್ಚ್ ಆರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದ 32 ಡಿಗ್ರಿ ಸೆಲ್ಸಿಯಸ್ ತಾಪಮಾನ, ಈ ಬಾರಿ 36 ರಿಂದ 38 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗಿದೆ.
2020ರಿಂದ ಇಲ್ಲಿಯವರೆಗೆ ಇದ್ದ ತಾಪಮಾನವನ್ನು ಈ ಬಾರಿ ಮಾರ್ಚ್ ಆರಂಭದಲ್ಲೇ ಹಿಂದಿಕ್ಕಿದೆ. ಮಾರ್ಚ್ ತಿಂಗಳ ಹಿಂದಿನ ವರ್ಷಗಳ ಗರಿಷ್ಠ ತಾಪಮಾನ ಹೋಲಿಕೆ ನೋಡುವುದಾದರೆ, 2020 ಮಾರ್ಚ್ನಲ್ಲಿ 32.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. 2021ರಲ್ಲಿ 30.7, 2022ರಲ್ಲಿ 32.5, 2023ರಲ್ಲಿ 33.8, 2024ನಲ್ಲಿ 34.5, 2025 ಮಾರ್ಚ್ನಲ್ಲಿ 37.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಚಿಕ್ಕೋಡಿಯಲ್ಲಿ ಅವಧಿಗೆ ಮುನ್ನವೇ ಬಿಸಿಲಿನ ಝಳಕ್ಕೆ ಜನರು ತುತ್ತಾಗುತ್ತಿದ್ದಾರೆ. ಜನರು ಮಕ್ಕಳೊಂದಿಗೆ ಮನೆಯಿಂದ ಹೊರ ಬರಲು ಯೋಚನೆ ಮಾಡುತ್ತಿದ್ದಾರೆ. ನಗರದಲ್ಲಿ ಬಿಸಿಲಿನ ದಾಹ ತಣಿಸಿಕೊಳ್ಳಲು ಕಲ್ಲಂಗಡಿ, ತಂಪು ಪಾನೀಯ ಅಂಗಡಿಗಳ ಮುಂದೆ ಜನ ಸೇರುತ್ತಿದ್ದಾರೆ.