
ಯಾದಗಿರಿ: ಕೆಂಡದಂತಹ ಉರಿ ಬಿಸಿಲಿನ ತಾಪಕ್ಕೆ ನಲುಗಿ ಹೋಗುತ್ತಿರುವ ಜನತೆಗೆ ತುಸು ನೆಮ್ಮದಿ ಮೂಡಿಸಿರುವುದು ನಗರಸಭೆಯು ನಗರದ ಪ್ರಮುಖ ಜನವಸತಿ ಪ್ರದೇಶಗಳಲ್ಲಿ ಸ್ಥಾಪಿಸಿದ ಕುಡಿಯುವ ನೀರಿನ ಅರವಟ್ಟಿಗೆ. ಇದು ಗ್ರಾಮೀಣ ಪ್ರದೇಶದ ಜನತೆಗೆ ನೀರಿನ ದಾಹವನ್ನು ಇಂಗಿಸುತ್ತಿದೆ.

j3tvkannada
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಂಡದಂತ ಬಿಸಿಲು ಅನುಭವಕ್ಕೆ ಬರುತ್ತಿದೆ. ಹೀಗಾಗಿ ಜನ-ಜಾನುವಾರಿಗೆ ಕುಡಿಯುವ ನೀರಿನ ಅರವಟಿಗೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಸ್ಥಾಪನೆ ಮಾಡಲಾಗಿದೆ. ಜಿಲ್ಲೆಯಲ್ಲಿ 38ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇದರಿಂದ ನೀರಿನ ದಾಹವೂ ಹೆಚ್ಚಾಗುತ್ತಿದೆ. ಹೀಗಾಗಿ ನಗರಸಭೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳವರು ಅರವಟ್ಟಿಗೆ ಸ್ಥಾಪನೆ ಮಾಡಿದ್ದಾರೆ.
ನಿತ್ಯವೂ ಮಡಿಕೆಗಳನ್ನು ಸ್ವಚ್ಛಗೊಳಿಸಿ ಶುದ್ಧವಾದ ನೀರನ್ನು ತುಂಬಿಸಲಾಗುತ್ತದೆ. ನೀರು ತಂಪಾಗಿಸಲೆಂದು ಎಲ್ಲಾ ಮಡಿಕೆಗಳಿಗೆ ನೀರಿನಿಂದ ತೊಯ್ದ ನಾರಿನ ಚೀಲಗಳನ್ನು ಒದಗಿಸಿರುವುದರಿಂದ ಮಡಿಕೆಯಲ್ಲಿ ನೈಸರ್ಗಿಕವಾಗಿ ರುಚಿಯಾದ ತಂಪಾದ ನೀರು ಬಾಯಾರಿಕೆಯನ್ನು ನೀಗಿಸುತ್ತದೆ. ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೇಳೆ ನೀರು ಪರೀಕ್ಷಿಸಿ ಖಾಲಿಯಾಗಿದ್ದರೆ ತುಂಬಿಸಲಾಗುತ್ತಿದೆ. ನಗರದಲ್ಲಿ ಈಗಾಗಲೇ ಕೆಲ ಕಡೆ ಮಾತ್ರ ನೀರಿನ ಅರವಟ್ಟಿಗೆ ಸ್ಥಾಪನೆ ಮಾಡಲಾಗಿದೆ.

j3tvkannada
ಪ್ಲಾಸ್ಟಿಕ್ ಟ್ಯಾಂಕ್ನ ನೀರಿಗಿಂತಲೂ ಮಣ್ಣಿನ ಮಡಿಕೆಯಲ್ಲಿನ ನೀರು ತಂಪು ಮತ್ತು ಬಾಯಾರಿಕೆಯನ್ನು ನೀಗಿಸುವಲ್ಲಿ ಹೆಚ್ಚು ಪರಿಣಾಮಕಾರಿ ಎನ್ನುವ ಕಾರಣ ಮಣ್ಣಿನ ಮಡಿಕೆಯ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘ ಸಂಸ್ಥೆಗಳ ಪದಾಧಿಕಾರಿಗಳು ನೀಡುವ ಮಾಹಿತಿಯಾಗಿದೆ. ನಗರಕ್ಕೆ ಪ್ರತಿ ನಿತ್ಯ ನೂರಾರು ಗ್ರಾಮೀಣ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಬೇಸಿಗೆಯಲ್ಲಿ ನೀರಿನ ದಾಹ ಸಹಜ. ಹೋಟೆಲ್ನಲ್ಲಿ ತಿಂಡಿ, ಊಟ ತೆಗೆದುಕೊಂಡರೆ ನೀರು ಕೊಡುತ್ತಾರೆ. ಹೀಗಾಗಿ ನೀರಿಗಾಗಿ ಪರಿತಪಿಸುವಂತಾಗುತ್ತದೆ.
ಇನ್ನೂ ಎಲ್ಲೆಲ್ಲಿ ಬೇಕಾಗಿದೆ:-
ಜನರು ಹೆಚ್ಚಾಗಿ ಓಡಾಡುವ ಜಾಗಗಳಲ್ಲಿ ನೀರಿನ ಅರವಟ್ಟಿಗೆ ಸ್ಥಾಪನೆ ಮಾಡಬೇಕು ಎನ್ನುವುದು ಜನತೆ ಆಶಯವಾಗಿದೆ. ಕೇಂದ್ರ ಮತ್ತು ಹಳೆ ಬಸ್ ನಿಲ್ದಾಣ, ಪದವಿ ಕಾಲೇಜು, ಕನಕ ವೃತ್ತ, ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತ, ಹೊಸಳ್ಳಿ ಕ್ರಾಸ್, ಗಂಜ್ ವೃತ್ತ, ಮೈಲಾಪುರ ಆಗಸಿ, ಹತ್ತಿಕುಣಿ ಕ್ರಾಸ್ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಅರವಟ್ಟಿಗೆ ಸ್ಥಾಪನೆಯಾದರೆ ಗ್ರಾಮೀಣ ಭಾಗದಿಂದ ಬರುವ ಜನರಿಗೆ ಅನುಕೂಲವಾಗುತ್ತದೆ. ನಗರ ಪ್ರದೇಶದಲ್ಲಿ ಸ್ಥಾಪಿಸಿದಂತೆ ಆಯಾ ಗ್ರಾಮ ಪಂಚಾಯಿತಿ ಮುಖ್ಯ ಸ್ಥಳದಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಬೇಕು. ಅದೆಲ್ಲದಕ್ಕಿಂತ ಮಿಗಿಲಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ತೊಟ್ಟಿ ನಿರ್ಮಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಗ್ರಾಮೀಣ ಪ್ರದೇಶದ ಜನತೆ ಜಿಲ್ಲಾ ಪಂಚಾಯಿತಿ ಸಿ.ಇ.ಒ ಅವರಿಗೆ ಮನವಿ ಮಾಡಿದ್ದಾರೆ.