
ಗದಗ: ಅವಳಿ ನಗರಕ್ಕೆ ಪೂರೈಕೆಯಾಗುವ ಹಮ್ಮಿಗಿ ಬ್ಯಾರೇಜ್ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದ್ದರೂ ಗದಗ ಬೆಟಗೇರಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಮಾತ್ರ ತಪ್ಪಿಲ್ಲ. ನೀರು ಪೂರೈಸುವ ಪೈಪ್ಲೈನ್ ವ್ಯವಸ್ಥೆ ಹದಗೆಟ್ಟಿರುವುದು ಹಾಗೂ ಹಮ್ಮಿಗಿ, ಪಾಪನಾಶಿ ಮತ್ತು ಡಂಬಳ ಭಾಗದಲ್ಲಿ ಅನಿಯಮಿತ ಲೋಡ್ಶೆಡ್ಡಿಂಗ್ ಕಾರಣದಿಂದಾಗಿ ನೀರು ಪೂರೈಕೆ ಜಾಲ ಅಧ್ವಾನಗೊಂಡಿದೆ.

j3tvkannada
ಅವಳಿ ನಗರದ ಜನರು ಕಳೆದ 20 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ಬಗೆ ಹರಿಸಲು ಈವರೆಗೆ ನೂರಾರು ಕೋಟಿ ಹಣ ಖರ್ಚಾಗಿದೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಅವಳಿ ನಗರದ ಕೆಲವು ವಾರ್ಡ್ಗಳಲ್ಲಿ ಈಗಲೂ 15ರಿಂದ 20 ದಿನಗಳಿಗೊಮ್ಮೆ ನೀರು ಬರುತ್ತದೆ. ಇನ್ನು ಕೆಲವು ವಾರ್ಡ್ಗಳಿಗೆ ಎಂಟು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಸದ್ಯ ನೀರಿನ ಕೊರತೆ ಇರುವ ವಾರ್ಡ್ಗಳಿಗೆ ನಗರಸಭೆ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ನದಿ ನೀರು ಪೂರೈಕೆಯಲ್ಲಿ ಆಗುವ ವ್ಯತ್ಯಯ ಸರಿದೂಗಿಸಲು ನಗರದ 35 ವಾರ್ಡ್ಗಳಲ್ಲಿ ಕೂಡ ನಗರಸಭೆ ವತಿಯಿಂದ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದರೆ, ಬಹುತೇಕ ವಾರ್ಡ್ಗಳಲ್ಲಿ ಕೊಳವೆ ಬಾವಿಗಳು ದುರಸ್ತಿಗೆ ಬಂದಿವೆ. ಹೊಸದಾಗಿ ಕೊಳವೆ ಬಾವಿ ಕೊರೆಸಲು ಪ್ರತಿ ವಾರ್ಡ್ಗೆ ₹5 ಲಕ್ಷ ಬಿಡುಗಡೆ ಆಗಿದ್ದು, ಹೊಸ ಬೋರ್ವೆಲ್ಗಳನ್ನು ಕೊರೆಸಲು ಸಿದ್ದತೆ ನಡೆದಿದೆ.
ಅವಳಿ ನಗರಕ್ಕೆ ಪ್ರತಿದಿನ 28 ಎಂ.ಎಲ್.ಡಿ ನೀರು ಬೇಕಿದೆ. ಗದಗ ಬೆಟಗೇರಿ ನಗರಕ್ಕೆ ಎಷ್ಟು ಬೇಕೋ ಅಷ್ಟು ನೀರು ಲಭ್ಯ ಇದೆ. ಆದರೆ, ಅಸಮರ್ಪಕವಾಗಿರುವ ಪೈಪ್ಲೈನ್ ವ್ಯವಸ್ಥೆ ಮತ್ತು ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದ ಕಾರಣದಿಂದಾಗಿ ನೀರು ಹರಿಯುವ ವೇಗಕ್ಕೆ ಪದೆಪದೇ ತಡೆ ಬೀಳುತ್ತಿದೆ. ಹಮ್ಮಿಗಿ, ಪಾಪನಾಶಿ, ಡಂಬಳ ಈ ಯಾವುದೇ ಜಾಗದಲ್ಲಿ ಐದು ನಿಮಿಷ ಕರೆಂಟ್ ಹೋದರೂ ಪೈಪ್ ಮೂಲಕ ಹರಿಯುವ ನೀರು ಮೊದಲಿನ ವೇಗ ಪಡೆಯಲು ಕನಿಷ್ಠ ಎರಡು ಮೂರು ಗಂಟೆಗಳು ಬೇಕು. ಹೀಗಾಗಿ ನಿರಂತರ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ್ ಪವಾರ.
ಇದರ ಜತೆಗೆ 24/7 ಕುಡಿಯುವ ನೀರು ಪೂರೈಕೆಯ ಪೈಪ್ಲೈನ್ ಸರಿಯಾಗಿ ಜೋಡಣೆ ಆಗಬೇಕಿದೆ. ಪ್ರತಿ ಏರಿಯಾಗೆ ವಾಲ್ಗಳನ್ನು ಅಳವಡಿಸಬೇಕಿದೆ. ಹೊಸ ಪೈಪ್ಲೈನ್ ಮಾಡಿಸಲು ಪ್ರಸ್ತಾವ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ. ಈ ಎರಡು ಸಮಸ್ಯೆಗಳು ಬಗೆಹರಿದರೆ ಪ್ರತಿದಿನ ನೀರು ಪೂರೈಸಲು ಯಾವುದೇ ಅಡ್ಡಿ ಇಲ್ಲ ಎನ್ನುತ್ತಾರೆ ಲಕ್ಷ್ಮಿ ಗಂಗಿಮಡಿ.