
ವಿಜಯಪುರ: ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

j3tvkannada
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ವಿಜಯಪುರ ಹೃದಯ ಭಾಗದ ಕೇಂದ್ರ ಬಸ್ ನಿಲ್ದಾಣದಲ್ಲಿ ಈಗಾಗಲೇ ಅಶ್ವಾರೂಢ ವೀರರಾಣಿ ಚೆನ್ನಮ್ಮನವರ ಪ್ರತಿಮೆ ಸ್ಥಾಪಿಸಲಾಗಿದೆ.
ಶಕ್ತಿ ಯೋಜನೆ ಉದ್ಘಾಟನೆ ಸಂದರ್ಭದಲ್ಲಿ ಬಸ್ ನಿಲ್ದಾಣಕ್ಕೆ ರಾಣಿ ಚೆನ್ನಮ್ಮನವರ ಹೆಸರಿಡುತ್ತೇನೆ ಎಂದು ತಿಳಿಸಿದ್ದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ನನ್ನ ಕೋರಿಕೆ ಹಾಗೂ ಮುಖ್ಯಮಂತ್ರಿಗಳ ಸೂಚನೆ ಪರಿಗಣಿಸಿ ಇದೀಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವೀರರಾಣಿ ಕಿತ್ತೂರು ಚೆನ್ನಮ್ಮನವರ ಹೆಸರು ನಾಮಕರಣ ಮಾಡಲು ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವೇಶ್ವರರ ಹೆಸರನ್ನು ನಾಮಕರಣಗೊಳಿಸಲಾಗಿದೆ. ಮಮದಾಪುರದಲ್ಲಿ 1200 ಎಕರೆ ಪ್ರದೇಶವನ್ನು ಸಿದ್ದೇಶ್ವರ ಶ್ರೀ ಜೀವ ವೈವಿಧ್ಯತೆಯ ಪಾರಂಪರಿಕ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಈಗಾಗಲೇ ಹೆಸರಿಸಲಾಗಿದೆ.
ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ನಾಮಕರಣಗೊಳಿಸಲಾಗಿದೆ. ಹೀಗೆ ಪುಣ್ಯಪುರುಷರ ಹೆಸರು ನಾಮಕರಣಗೊಳಿಸುವ ಮೂಲಕ ಅವರ ಆದರ್ಶಗಳು ಶಾಶ್ವತವಾಗಿ ಜನಮಾನಸದಲ್ಲಿ ನೆಲೆಗೊಳ್ಳುವಂತೆ ಮಾಡಲಾಗಿದೆ.
ವಿಜಯಪುರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೆ ಆಗಮಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ಥಾಪಿಸಿರುವ ರಾಣಿ ಚೆನ್ನಮ್ಮನವರ ಬೃಹತ್ ಪ್ರತಿಮೆ ಅನಾವರಣ ಹಾಗೂ ನಾಮಕರಣಗೊಳಿಸುವರು ಎಂದು ಸಚಿವರು ತಿಳಿಸಿದ್ದಾರೆ.