
ಚಿತ್ರದುರ್ಗ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಬಾಲಭವನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬೇಸಿಗೆಯ ಉಚಿತ ಶಿಬಿರ ಆಯೋಜಿಸಲಾಗಿದೆ. ಬೇಸಿಗೆ ರಜೆ ಆರಂಭವಾಗಿ ತಿಂಗಳಾದರೂ ಜಿಲ್ಲೆಯಲ್ಲಿ ಈ ಬೇಸಿಗೆ ಶಿಬಿರ ಆಯೋಜನೆ ಮಾಡದ ಕಾರಣ ಕೋಟೆನಾಡಿನ ಮಕ್ಕಳಿಗೆ ಬೇಸಿಗೆ ಶಿಬಿರದ ಭಾಗ್ಯ ಇಲ್ಲವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಲಭವನದಲ್ಲಿ ಪ್ರತಿ ವರ್ಷ 15 ದಿನಗಳ ಕಾಲ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗುತ್ತದೆ. ಈ ವರ್ಷದಿಂದ ಶಾಲಾ ಶಿಕ್ಷಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಗ್ರಾಮೀಣ ಮಕ್ಕಳಿಗೆ ‘ಅರಿವು’ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ.

ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲೇ ಬೇಸಿಗೆ ಶಿಬಿರ ಆಯೋಜಿಸಲಾಗುತ್ತದೆ. ಮಳೆ ಆರಂಭವಾದರೆ ಶಿಬಿರಕ್ಕೆ ಬರಲು ಮಕ್ಕಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಏಪ್ರಿಲ್ನಲ್ಲೇ ಎಲ್ಲಾ ಜಿಲ್ಲೆಗಳಲ್ಲಿ ಬೇಸಿಗೆ ಶಿಬಿರ ಪೂರ್ಣಗೊಳ್ಳುತ್ತದೆ. ಏಪ್ರಿಲ್ ಮುಗಿದು ಮೇ ಆರಂಭಗೊಂಡರೂ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸುವ ಲಕ್ಷಣಗಳೇ ಕಾಣಿಸುತ್ತಿಲ್ಲ. ರಾಜ್ಯದಲ್ಲೇ ಮಾದರಿ ಎನ್ನಬಹುದಾದ ಬಾಲಭವನ ನಗರದಲ್ಲಿದೆ. 3.10 ಎಕರೆ ವಿಸ್ತೀರ್ಣದಲ್ಲಿ ಅರಳಿ ನಿಂತಿರುವ ಬಾಲಭವನ ಮಕ್ಕಳ ಚಟುವಟಿಕೆಗಳ ತಾಣವಾಗಬೇಕಾಗಿತ್ತು. ಮಕ್ಕಳಿಗೆ ಆಟವಾಡಲು ಬೇಕಾದ ಆಟಿಕೆಗಳ ಸೌಲಭ್ಯವಿದೆ.
ಎಲ್ಲೆಡೆ ಮರಗಿಡಗಳಿರುವ ಕಾರಣ ಮಕ್ಕಳಿಗೆ ಅರಣ್ಯದ ಅನುಭವವಾಗುತ್ತದೆ. ಇಂತಹ ಬಾಲಭವನ ಮಕ್ಕಳ ಪಾಲಿಗೆ ಬೇಸಿಗೆ ರಜೆಯ ಅವಧಿಯಲ್ಲೂ ಉಪಯೋಗಕ್ಕೆ ಬರುತ್ತಿಲ್ಲ ಎಂದು ಪೋಷಕರು ಬೇಸರ ವ್ಯಕ್ತಪಡಿಸುತ್ತಾರೆ. ಫೆಬ್ರುವರಿ ಕಡೆಯ ವಾರದಿಂದಲೂ ಜಿಲ್ಲಾ ಬಾಲಭವನ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಬೇಸಿಗೆ ಶಿಬಿರದ ಬಗ್ಗೆ ವಿಚಾರಿಸುತ್ತಿದ್ದೇನೆ. ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ದಿನ ದೂಡುತ್ತಿದ್ದಾರೆ. ಬೇಸಿಗೆ ರಜೆ ಮುಗಿದು ಹೋಗುವ ಹಂತಕ್ಕೆ ಬಂದರೂ ಇನ್ನೂ ಶಿಬಿರ ಆಯೋಜನೆ ಮಾಡಿಲ್ಲ ಎಂದು ಬುದ್ದ ನಗರ ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.