
ಮೈಸೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮ-ನರೇಗಾ) ಯೋಜನೆಯು ಗ್ರಾಮೀಣ ಕೃಷಿಕರ ಸ್ವಾವಲಂಬಿ ಬದುಕಿಗೆ ಬಲ ತುಂಬುತ್ತಿದೆ.

j3tvkannada
ಯೋಜನೆಯನ್ನು ಹೇಗೆಲ್ಲಾ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದರ ಕೆಲವು ಮಾದರಿಗಳು ಜಿಲ್ಲೆಯಲ್ಲಿ ಕಂಡುಬಂದಿವೆ. ಆ ಯೋಜನೆಯಲ್ಲಿ ಉದ್ಯೋಗ ಚೀಟಿ ಪಡೆದುಕೊಂಡು ಕೂಲಿ ಕೆಲಸಕ್ಕೆ ಹೋಗಿ ಕೂಲಿ ಪಡೆಯುವುದು ಒಂದೆಡೆಯಾದರೆ, ಸ್ವಂತ ಆಸ್ತಿ ಸೃಜನೆಗೆ, ಕೃಷಿ ಚಟುವಟಿಕೆಗೂ ಯೋಜನೆಯ ಲಾಭವನ್ನು ಗಳಿಸಿಕೊಂಡಿದ್ದಾರೆ. ಇತರರಿಗೂ ಸ್ಫೂರ್ತಿ ನೀಡುವ ಕಥನಗಳು ತೆರೆದುಕೊಂಡಿವೆ. ಟಿ. ನರಸೀಪುರ ತಾಲ್ಲೂಕಿನ ತುರಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರವನಹಳ್ಳಿ ಗ್ರಾಮದ ರೈತ ಸಿದ್ದರಾಜು ಅವರು ಮನರೇಗಾ ಸಹಾಯದಿಂದ ಸೀಬೆ ಬೆಳೆ ಹಾಕಿದ್ದಾರೆ. ತೈವಾನ್ ತಳಿಯ ಸೀಬೆಯನ್ನು ಅವರು ಬೆಳೆದಿದ್ದು. ಉತ್ತಮ ಫಲ ಬಂದಿದ್ದು ಲಾಭವನ್ನು ತಂದುಕೊಡುತ್ತಿದೆ. 1.25 ಎಕರೆ ಜಮೀನಿನಲ್ಲಿ ಸಾವಿರ ಸಸಿಗಳನ್ನು ಅವರು ನೆಟ್ಟಿದ್ದರು. ಅದೀಗ ಫಲ ಕೊಡುತ್ತಿದೆ. ಅದನ್ನು ನಿತ್ಯ 200ರಿಂದ 250 ಸೀಬೆಯನ್ನು ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯವಾಗಿ ಮಾರುವುದರೊಂದಿಗೆ ಕೆಲವು ಮಾರ್ಟ್ ಗಳಿಗೂ ತಲುಪಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆಯ ನೆರವನ್ನು ಅವರು ಪಡೆದುಕೊಂಡು ಸೀಬೆ ಕೃಷಿ ಮಾಡುತ್ತಿದ್ದಾರೆ. ತಂಬಾಕು ಬಿಟ್ಟು ಪಿರಿಯಾಪಟ್ಟಣ ತಾಲ್ಲೂಕಿನ ಹಿಟ್ಟೆಹೆಬ್ಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಟ್ಟೆಹೆಬ್ಬಾಗಿಲು ಗ್ರಾಮದ ರೈತ ಎಚ್.ಎಸ್. ಬಸವರಾಜು ತಂಬಾಕು ಕೃಷಿ ತೊರೆದು, ನರೇಗಾ ನೆರವು ಪಡೆದು ಹಿಪ್ಪುನೇರಳೆ (ರೇಷ್ಮೆ) ಕೃಷಿ ಮಾಡುತ್ತಿದ್ದಾರೆ. ರೇಷ್ಮೆ ಇಲಾಖೆಯ ರೇಷ್ಮೆ ಅಭಿವೃದ್ಧಿ ಯೋಜನೆಯ ಬೆಂಬಲದ ಜೊತೆಗೆ ನರೇಗಾದಲ್ಲೂ ಸಹಾಯಧನ ತೆಗೆದುಕೊಂಡಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಹೊಸದಾಗಿ ಹಿಪ್ಪನೇರಳೆ ನಾಟಿಗೆ 182 ಮಾನವ ದಿನಗಳ ಸೃಜನೆಗೆ 64,565 ಅನುದಾನ ಪಡೆದುಕೊಂಡು ಬೇಸಾಯದಲ್ಲಿ ತೊಡಗಿದ್ದಾರೆ. ರೇಷ್ಮೆ ಹುಳು ಸಾಕಣೆ ಘಟಕವನ್ನು ಮಾಡಿಕೊಂಡಿದ್ದಾರೆ.