
ಉತ್ತರಕನ್ನಡ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರ ನಡುವೆಯೂ ಮತ್ತಷ್ಟು ಹೆಚ್ಚು ಅಂಕ ಗಳಿಸುವ ನಿರೀಕ್ಷೆಯೊಂದಿಗೆ ಈ ಬಾರಿ ಎರಡನೇ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಲ್ಪಟ್ಟ ಅಭ್ಯರ್ಥಿಗಳ ಸಂಖ್ಯೆ ಅಧಿಕವಾಗಿದೆ.

j3tvkannada
ಕಳೆದ ವರ್ಷ ದ್ವಿತೀಯ ಪಿಯುಸಿಗೆ ಸರಣಿ ಮಾದರಿಯಲ್ಲಿ ಮೂರು ವಾರ್ಷಿಕ ಪರೀಕ್ಷೆ ನಡೆಸುವ ಪದ್ಧತಿ ಆರಂಭಿಸಲಾಗಿತ್ತು. ಮೊದಲ ವರ್ಷ ಹೆಚ್ಚು ಜಾಗೃತಿ ಇರದ ಕಾರಣದಿಂದ ಎರಡು ಮತ್ತು ಮೂರನೆ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಆದರೆ, ಈ ಬಾರಿ ಏ.24 ರಿಂದ ಮೇ 7ರ ವರೆಗೆ ನಡೆಯುವ ಎರಡನೇ ಪರೀಕ್ಷೆಗೆ ಜಿಲ್ಲೆಯಲ್ಲಿ 11,724 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ. ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದವರಿಗಿಂತಲೂ ಮೊದಲ ಪರೀಕ್ಷೆಯಲ್ಲಿ ಗಳಿಸಿದ ಅಂಕಕ್ಕಿಂತ ಹೆಚ್ಚು ಗಳಿಕೆಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕವಾಗಿದೆ. ವಿಜ್ಞಾನ ವಿಭಾಗದಲ್ಲಿ ಮತ್ತು ಇಂಗ್ಲಿಷ್ ಭಾಷಾ ವಿಷಯ ಪರೀಕ್ಷೆಯನ್ನು ಎರಡನೇ ಬಾರಿಗೆ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ ಎಂಬುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಭೌತಶಾಸ್ತ್ರ ವಿಷಯಕ್ಕೆ 1,373, ರಸಾಯನಶಾಸ್ತ್ರ ವಿಷಯಕ್ಕೆ 1,476, ಗಣಿತಶಾಸ್ತ್ರಕ್ಕೆ 1,437 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇಂಗ್ಲಿಷ್ ಭಾಷಾ ವಿಷಯದ ಪರೀಕ್ಷೆ ಎರಡನೇ ಬಾರಿಗೆ ಬರೆಯಲು 1,534 ಮಂದಿ ಅಸಕ್ತಿವಹಿಸಿದ್ದಾರೆ. ಉಳಿದ ಪ್ರತಿ ವಿಷಯಗಳಿಗೂ ಸರಾಸರಿ 300 ವಿದ್ಯಾರ್ಥಿಗಳ ನೋಂದಣಿಯಾಗಿದೆ ಎಂಬುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಯು) ಎಚ್.ರಾಜಪ್ಪ ತಿಳಿಸಿದ್ದಾರೆ.
ಮೊದಲ ಪರೀಕ್ಷೆಯಲ್ಲಿ 2,220 ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದರು. ಎರಡನೇ ಪರೀಕ್ಷೆಯಲ್ಲಿ ಅವರಿಗಿಂತಲೂ ಅಂಕ ಸುಧಾರಿಸಿಕೊಳ್ಳಲು ಪರೀಕ್ಷೆಗೆ ನೋಂದಾಯಿಸಿಕೊಂಡವರ ಸಂಖ್ಯೆ ಹೆಚ್ಚಿದೆ ಎಂದು ಮಾಹಿತಿ ನೀಡಿದರು.