
ಉತ್ತರ ಕನ್ನಡ: ಅಘನಾಶಿನಿ ನದಿ ದಡದಲ್ಲಿರುವ ಹೆಗಡೆ, ದೀವಗಿ ಹಾಗೂ ಹೊಲನಗದ್ದೆ ಗ್ರಾಮ ಪಂಚಾಯಿತಿಗಳ ಸುಮಾರು 820 ಕುಟುಂಬಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಕಾಯಕ ಈ ವರ್ಷವೂ ಮುಂದುವರಿದಿದೆ.

ಹೆಗಡೆ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 380 ದೀವಗಿ ಗ್ರಾಮ ಪಂಚಾಯಿತಿಯಲ್ಲಿ 60 ಮತ್ತು ಹೊಲನಗದ್ದೆ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 380 ಕುಟುಂಬಗಳಿಗೆ ನಿತ್ಯ ಟ್ಯಾಂಕರ್ ಮೂಲಕ ಸ್ಥಳೀಯ ಗ್ರಾಮ ಪಂಚಾಯಿತಿ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ.
ಅಘನಾಶಿನಿ ನದಿ ತಟದ ಹೆಗಡೆ, ದೀವಗಿ ಹಾಗೂ ಒಂದು ಬದಿ ನದಿಯ ಹಿನ್ನೀರು ಮತ್ತು ಇನ್ನೊಂದು ಬದಿ ಅರಬ್ಬಿ ಸಮುದ್ರ ಆವರಿಸಿರುವ ಹೊಲನಗದ್ದೆ ಗ್ರಾಮ ಪಂಚಾಯಿತಿಯಲ್ಲಿ ಬೇಸಿಗೆಯಲ್ಲಿ ಕುಡಿಯಲು ಬಳಕೆ ಮಾಡುವ ತೆರೆದ ಬಾವಿಗಳ ನೀರಿನಲ್ಲಿ ಉಪ್ಪಿನ ಅಂಶ ಹೆಚ್ಚಾಗುತ್ತಿದೆ ಎಂಬುದು ಜನರ ದೂರು. ಗ್ರಾಮ ಪಂಚಾಯಿತಿಗೆ ನೀರು ಪೂರೈಕೆ ಮಾಡುವ ಮೂರು ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಕಂಡು ಬಂದಿದೆ.
ಒಂದು ತೆರೆದ ಬಾವಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿ ಸಿಮೆಂಟ್ ರಿಂಗ್ ಅಳವಡಿಸುವ ಕಾರ್ಯ ನಡೆದಿದೆ. ಸದ್ಯ ಸಮೀಪದ ಮಚಗೋಣ ಹಾಗೂ ಅಳ್ವೆಕೋಡಿಯಿಂದ ಕುಡಿಯುವ ನೀರು ತರಿಸಿಕೊಳ್ಳಲಾಗುತ್ತಿದೆ. ಪಂಚಾಯಿತಿಯ ಹೆಚ್ಚಿನ ಅನುದಾನ ಕುಡಿಯುವ ನೀರಿಗೆ ಬಳಕೆಯಾಗುತ್ತಿದ್ದು, ನಿತ್ಯ ಪ್ರತಿ ವ್ಯಕ್ತಿಗೆ 55 ಲೀಟರ್, ದನಕರುಗಳಿಗೆ ಪ್ರತ್ಯೇಕ 100 ಲೀಟರ್ ನೀರು ಪೂರೈಸಲಾಗುತ್ತಿದೆ ಎಂದು ಹೆಗಡೆ ಗ್ರಾಮ ಪಂಚಾಯಿತಿ ಪಿ.ಡಿ.ಒ ವೆಂಕಟ್ರಮಣ ಪಟಗಾರ ಹೇಳಿದರು.