
ಕೊಪ್ಪಳ: ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಸುಂದರ ಹಸಿರು ವಾತಾವರಣವಿದ್ದರೂ ಜಾನುವಾರುಗಳ ಹಾವಳಿಯಿಂದಾಗಿ ಅದೆಲ್ಲವೂ ಹಾಳಾಗುತ್ತಿತ್ತು. ಶಾಲೆಯಲ್ಲಿ ಶೌಚಾಲಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ಬಯಲು ಶೌಚದ ಮೊರೆ ಹೋಗಬೇಕಿತ್ತು. ಇದನ್ನು ತಪ್ಪಿಸಲು ಜಿಲ್ಲಾ ಪಂಚಾಯಿತಿ ಒಂದೇ ಬಾರಿ 274 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಆರಂಭಿಸಿದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಡಿ ವರ್ಷಪೂರ್ತಿ ಒಂದಿಲ್ಲೊಂದು ಕೆಲಸಗಳು ನಡೆಯುತ್ತಿದ್ದರೂ ಇಲ್ಲಿನ ಜಿಲ್ಲಾ ಪಂಚಾಯಿತಿ 2024-25ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿದೆ. 274 ಶೌಚಾಲಯ ಸೇರಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು 461 ಯೋಜನೆಗಳನ್ನು ಆರಂಭಿಸಿದೆ.
ಗಂಗಾವತಿ ತಾಲ್ಲೂಕಿನಲ್ಲಿ 65, ಕನಕಗಿರಿ 32, ಕಾರಟಗಿ 17, ಕೊಪ್ಪಳ 49, ಕುಕನೂರು 42, ಕುಷ್ಟಗಿ 156 ಮತ್ತು ಯಲಬುರ್ಗಾ ತಾಲ್ಲೂಕಿನಲ್ಲಿ 96 ಶೌಚಾಲಯಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಶೌಚಾಲಯಗಳನ್ನು ಆದ್ಯತೆ ಮೇರೆಗೆ ನಿರ್ಮಾಣ ಮಾಡುವ ಜೊತೆಗೆ ಕಾಂಪೌಂಡ್, ಆಟದ ಮೈದಾನಗಳನ್ನು ನಿರ್ಮಿಸಲಾಗುತ್ತಿದೆ. 321 ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, 140 ಪೂರ್ಣಗೊಂಡಿವೆ. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸಂಖ್ಯೆಯಲ್ಲಿ ಹಾಜರಾತಿ ಇರುವುದರಿಂದ ಮಕ್ಕಳು ಶೌಚಕ್ಕಾಗಿ ಬಯಲು ಅವಲಂಬಿಸಬೇಕಾಗುತ್ತಿತ್ತು. ಇದರಿಂದ ಶಾಲೆಯ ಸುತ್ತಲಿನ ವಾತಾವರಣವೂ ಹದಗೆಡುತ್ತಿತ್ತು. ಮೈದಾನದ ಕೊರತೆಯಿಂದಾಗಿ ಇರುವ ಚಿಕ್ಕ ಜಾಗದಲ್ಲಿಯೇ ಆಟೋಟಗಳು ನಡೆಯುತ್ತಿದ್ದವು. ಕೆಲವು ಶಾಲೆಗಳಲ್ಲಿ ಅದೇ ಊರಿನ ಇನ್ನೊಂದು ಶಾಲೆಯ ಮೈದಾನಕ್ಕೆ ಹೋಗಿ ಕ್ರೀಡೆಗಳನ್ನು ಆಯೋಜಿಸಬೇಕಾದ ಅನಿವಾರ್ಯತೆಯಿತ್ತು. ಈಗ ಶೌಚಾಲಯ ನಿರ್ಮಾಣ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲೆಯ ಆವರಣದಲ್ಲಿಯೇ ಸೌಲಭ್ಯ ಲಭಿಸಿದಂತಾಗುತ್ತಿದೆ.