

ಕಲಬುರಗಿ : ನಗರದ ರಿಂಗ್ ರಸ್ತೆಯ ರಾಮನಗರದಲ್ಲಿನ ಎಸ್.ಬಿ.ಐ ಎಟಿಎಂ ಕೇಂದ್ರಕ್ಕೆ ನುಗ್ಗಿದ್ದ ದರೋಡೆಕೋರರು ಎ.ಟಿ.ಎಂ ಯಂತ್ರವನ್ನು ಧ್ವಂಸ ಮಾಡಿ ₹18 ಲಕ್ಷ ದರೋಡೆ ಮಾಡಿದ್ದಾರೆ. ದರೋಡೆಕೋರರು ಬುಧವಾರ ನಸುಕಿನ ಜಾವ 4 ಗಂಟೆಯ ಸುಮಾರಿಗೆ ಕಾರಿನಲ್ಲಿ ಎಟಿಎಂ ಬಳಿಗೆ ಬಂದಿದ್ದಾರೆ. ಎಟಿಎಂನ ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಸ್ಪೇ ಮಾಡಿ ಹಣ ದರೋಡೆ ಮಾಡಿದ್ದಾರೆ. ಆರೋಪಿಗಳ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಾರಿನಲ್ಲಿ ಬಂದಿದ್ದ ಕಳ್ಳರು ಎಟಿಎಂ ಕೇಂದ್ರಗಳ ಒಳಗಿನ ಸಿಸಿಟಿವಿ ಕ್ಯಾಮೆರಾ, ಎಟಿಎಂ ಮೇಲಿನ ಕ್ಯಾಮೆರಾಗಳಿಗೂ ಕಪ್ಪು ಸ್ಟೇ ಮಾಡಿದ್ದಾರೆ. ಬಳಿಕ ಗ್ಯಾಸ್ ಕಟರ್ ಬಳಸಿ ಎ.ಟಿ.ಎಂ ಯಂತ್ರದ ಕ್ಯಾಶ್ ಬಾಕ್ಸ್ ತೆರೆದು, ಅದರಲ್ಲಿದ್ದ ₹18 ಲಕ್ಷ ದೋಚಿ ಪರಾರಿ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿ ಮಂಗಳವಾರ ಸಂಜೆ 6ರ ಸುಮಾರಿಗೆ ಎಟಿಎಂ ಯಂತ್ರದಲ್ಲಿ ಹಣ ಹಾಕಿದ್ದರು. ಮರುದಿನ ನಸುಕಿನ ಜಾವದಲ್ಲಿ ದರೋಡೆಯಾಗಿದೆ ಎಂದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಬರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.