

ತುಮಕೂರು : ಕೊಬ್ಬರಿ, ತೆಂಗಿನಕಾಯಿ, ಎಳನೀರು ದುಬಾರಿಯಾದಂತೆ ತೆಂಗಿನ ಕಾಯಿ ಚಿಪ್ಪುಗೆ (ಕೊಬ್ಬರಿ ಕಂಟ) ದಾಖಲೆ ಬೆಲೆ ಸಿಗುತ್ತಿದೆ. ಒಂದು ಟನ್ ಚಿಪ್ಪು ₹26,500ರ ವರೆಗೂ ಮಾರಾಟವಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಟನ್ಗೆ ₹7 ಸಾವಿರದಿಂದ ₹8 ಸಾವಿರದವರೆಗೂ ಸಿಗುತಿತ್ತು. ಎರಡು ವರ್ಷದ ಹಿಂದೆ ಟನ್ ₹18 ಸಾವಿರಕ್ಕೆ ಹೆಚ್ಚಳವಾಗಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಈ ಬಾರಿ ಹೊಸ ದಾಖಲೆ ಬರೆದಿದೆ. ಬೇಡಿಕೆಯಷ್ಟು ಚಿಪ್ಪು ಸಿಗದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು ತೆಂಗಿನ ಕಾಯಿ, ಎಳನೀರು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಕೊಬ್ಬರಿ ಉತ್ಪಾದನೆ ಕಡಿಮೆಯಾಗಿದ್ದು, ಚಿಪ್ಪಿನ ಕೊರತೆ ಎದುರಾಗಿದೆ. ಒಂದು ವರ್ಷದ ಅಂತರದಲ್ಲಿ ನಾಲ್ಕು ಪಟ್ಟು ದರ ಹೆಚ್ಚಳವಾಗಿದೆ. ಚಿಪ್ಪಿಗೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗಬಹುದು ಎಂದು ವರ್ತಕ ಸೋಮಶೇಖರ್ ಹೇಳುತ್ತಾರೆ.