
ಚಿಕ್ಕಬಳ್ಳಾಪುರ: ಮಾಂಸಕ್ಕಾಗಿಯೇ ಆಸ್ಟ್ರೇಲಿಯಾದಲ್ಲಿ ವಿಶಿಷ್ಟವಾದ ಕುರಿ ತಳಿಯನ್ನು ಅಭಿವೃದ್ಧಿಪಡಿಸಿದ್ದು, ಅದಕ್ಕೆ ಆಸ್ಟ್ರೇಲಿಯನ್ ವೈಟ್ ಎಂದು ಹೆಸರಿಟ್ಟಿದ್ದಾರೆ. ಈ ವಿಶಿಷ್ಟವಾದ ಕುರಿಗಳನ್ನು ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ಕುರಿ ಸಾಕಾಣಿಕೆದಾರ ವೀರಕೆಂಪಣ್ಣ ಅವರು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯನ್ ವೈಟ್ ಎಂಬುದು ಆಸ್ಟ್ರೇಲಿಯಾದ ಮಾಂಸದ ಕುರಿಗಳ ತಳಿಯಾಗಿದೆ. ಇದು ವೈಟ್ ಡಾರ್ಪರ್, ವ್ಯಾನ್ ರೂಯ್, ಪೋಲ್ ಡಾರ್ಸೆಟ್ ಮತ್ತು ಟೆಕ್ಸೆಲ್ ಕುರಿಗಳ ಆಯ್ದ ಸಂತಾನೋತ್ಪತ್ತಿಯಿಂದ ಹುಟ್ಟಿಕೊಂಡಿದೆ. ಸ್ವಯಂ ಕೂದಲು ಉದುರುವ ಈ ತಳಿಯ ಮಾಂಸದಲ್ಲಿ ಅತ್ಯಂತ ಉಪಯುಕ್ತ ಒಮೆಗಾ 3 ಫ್ಯಾಟಿ ಆಸಿಡ್ ಇದೆ. ಅಲ್ಲದೆ ದೇಶಿ ತಳಿಗಳಿಗಳಿಗಿಂತ ಅತಿ ವೇಗವಾಗಿ ತನ್ನ ತೂಕವನ್ನು ಹೆಚ್ಚಿಸಿಕೊಳ್ಳಬಲ್ಲ ಈ ತಳಿ 150 ಕೆ.ಜಿ. ವರೆಗೂ ತೂಗುತ್ತದೆ.
ಉತ್ತಮ ಗುಣಮಟ್ಟದ ಮಾಂಸ ಮತ್ತು ಕಡಿಮೆ ನಿರ್ವಹಣಾ ವೆಚ್ಚಕ್ಕಾಗಿ ಇದು ಪ್ರಸಿದ್ದವಾಗಿದೆ. ಈ ತಳಿಯ ಕುರಿಗಳು ಹೆಚ್ಚು ಮಾಂಸ ನೀಡುವುದಲ್ಲದೆ ಕಡಿಮೆ ಕೊಬ್ಬಿನ ಪ್ರಮಾಣವನ್ನು ಹೊಂದಿರುತ್ತವೆ. ಉಷ್ಣ ಮತ್ತು ಶೀತ ವಾತಾವರಣಗಳಿಗೂ ಇವು ಹೊಂದಿಕೊಳ್ಳಬಲ್ಲವು. ಬೇರೆ ತಳಿಗಳಿಗಿಂತ ವೇಗವಾಗಿ ಬೆಳೆಯುವ ಗುಣವಿದೆ. ಉದ್ದನೆಯ ಕೂದಲುಗಳಿರುವ ಹೊರಚರ್ಮ ಇಲ್ಲದ ಕಾರಣ ಹಾಗೂ ಕೂದಲು ಉದುರುವುದರಿಂದ ಉಣ್ಣೆ ತೆಗೆಯುವ ಅಗತ್ಯವಿಲ್ಲ. ರೋಗಪ್ರತಿರೋಧಕ ಶಕ್ತಿ ಹೆಚ್ಚು, ಆರೋಗ್ಯ ಸಮಸ್ಯೆಗಳ ಪ್ರಮಾಣ ತೀರಾ ಕಡಿಮೆ. ಕಡಿಮೆ ನಿರ್ವಹಣಾ ವೆಚ್ಚ ಮತ್ತು ಬೇರೆ ತಳಿಗಳೊಂದಿಗೆ ಮಿಶ್ರ ಸಂಕರ ತಳಿಗಳನ್ನು ಅಭಿವೃದ್ಧಿಪಡಿಸಲು ಇದನ್ನು ಬಳಸಬಹುದು ಎಂದು ಕುರಿ ಸಾಕಣಿಕೆದಾರ ಆನೂರು ವೀರಕೆಂಪಣ್ಣ ತಿಳಿಸಿದರು.