

ವಿಜಯನಗರ : ಹಂಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಿ ಪ್ರತಿ ಸ್ಮಾರಕಗಳಿಗೆ ಆಂತರಿಕ ರಸ್ತೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಕಮಲಾಪುರ ಕೆರೆ ಅಭಿವೃದ್ಧಿಪಡಿಸಿ ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸಲು ಶೀಘ್ರವೇ ಕ್ರಮ ವಹಿಸಲಾಗುವುದು’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು. ನಗರದಲ್ಲಿ ಮಂಗಳವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಮತ್ತು ಅಕರ್ವ ಎಂಟರ್ಪ್ರೈಸಸ್ ಸಹಯೋಗದಲ್ಲಿ ನಡೆದ ಪ್ರವಾಸಿ ಮಾರ್ಗದರ್ಶಿಗಳಿಗೆ ಒಂದು ದಿನದ ಪುನಶ್ವೇತನ ತರಬೇತಿ ಕಾರ್ಯಾಗಾರ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ನೂತನ ಗೈಡ್ಗಳು ತಾಳ್ಮೆ, ಸಹನೆ ಹಾಗೂ ನೈಜ ಇತಿಹಾಸ ತಿಳಿಸುವುದಲ್ಲದೆ, ಮಹಿಳಾ ಪ್ರವಾಸಿಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ’ ಎಂದರು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿದರು. ಬಳಿಕ 95 ಪ್ರವಾಸಿ ಮಾರ್ಗದರ್ಶಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ನೀಡಲಾಯಿತು. ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉದ್ಯಮಿಗಳಾದ ಶ್ರೀಪಾದ್, ಎಚ್.ಜಿ.ಗುರುದತ್, ತರಬೇತುದಾರ ಚಂದ್ರಶೇಖರ ಶಾಸ್ತ್ರಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಸಿಬ್ಬಂದಿ ಶ್ರೀಹರಿ ಇದ್ದರು.