
ಚಿಕ್ಕಮಗಳೂರು: ನಗರದ ಶತಮಾನೊತ್ಸವ ಕ್ರೀಡಾಂಗಣ ಅಭಿವೃದ್ಧಿಗೆ ಹಿಡಿದಿರುವ ಗ್ರಹಣ ಬಿಡುವ ಲಕ್ಷಣ ಕಾಣಿಸುತ್ತಿದೆ.
ಸಿಂಥೆಟಿಕ್ ಟ್ರ್ಯಾಕ್ ಜತೆಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಅನುದಾನ ಪಡೆದು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಕ್ರೀಡಾಂಗಣ ಅಭಿವೃದ್ಧಿಪಡಿಸಲು ಕ್ರೀಡಾ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಯೋಜನೆ ರೂಪಿಸಿವೆ.

ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ 5 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. 2020-21ರಲ್ಲಿ ಖೇಲೊ ಇಂಡಿಯಾ ಯೋಜನೆಯಡಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ 6.74 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕನಕಪುರದ ಕಂಪನಿಯೊಂದಕ್ಕೆ ಗುತ್ತಿಗೆಯನ್ನೂ ವಹಿಸಲಾಗಿತ್ತು. ಒಪ್ಪಂದದ ಪ್ರಕಾರ 2022ಕ್ಕೆ ಕಾಮಗಾರಿ ಮುಕ್ತಾಯಗೊಳಿಸಬೇಕಿತ್ತು. ಆದರೆ, ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರರು, ಜಲ್ಲಿ ಸುರಿದು ಬಿಟ್ಟು ಹೋಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರರಿಗೆ 44 ಲಕ್ಷ ಬಿಡುಗಡೆ ಮಾಡಿದ್ದು, ಬಾಕಿ ₹6.30 ಕೋಟಿ ಮೊತ್ತ ಇದೆ. ಉಳಿಕೆ ಕಾಮಗಾರಿಯನ್ನು ಈ ಮೊತ್ತದಲ್ಲಿ ಪೂರ್ಣಗೊಳಿಸಲು ಹೊಸದಾಗಿ ಟೆಂಡರ್ ಕರೆಯಲು ಲೋಕೋಪಯೋಗಿ ಇಲಾಖೆಗೆ ಕ್ರೀಡಾ ಇಲಾಖೆ ಪತ್ರ ವ್ಯವಹಾರ ನಡೆಸಿದೆ. ಆದರೆ, ಬಾಕಿ ಕಾಮಗಾರಿ ಪೂರ್ಣಗೊಳಿಸಲು ಇನ್ನೂ 7.46 ಕೋಟಿ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ಅಂದಾಜಿಸಿದೆ. ಹೆಚ್ಚುವರಿ ಮೊತ್ತ ಬಿಡುಗಡೆ ಮಾಡಿದರೆ ಟೆಂಡರ್ ಪ್ರಕ್ರಿಯೆ ನಡೆಸಬಹುದು ಎಂದು ತಿಳಿಸಿದೆ.