
ದಾವಣಗೆರೆ: ತಾಲ್ಲೂಕಿನ ತೋಳಹುಣಸೆ ಗ್ರಾಮದಲ್ಲಿ 16.37 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ಅವರು ಸೋಮವಾರ ಭೂಮಿಪೂಜೆ ನೆರವೇರಿಸಿದರು.

2021-22ನೇ ಸಾಲಿನಲ್ಲಿ ಜಲಜೀವನ ಮಿಷನ್ ವತಿಯಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ತೋಳಹುಣಸೆ, ಕುರ್ಕಿ, ಪಾಮೇನಹಳ್ಳಿ, ಚಂದ್ರನಹಳ್ಳಿ, ಬುಳ್ಳಾಪುರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ.
‘ಈ ಹಿಂದೆ ಮಾಯಕೊಂಡದಲ್ಲಿ ಕೈಗೊಂಡಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲವಾಗಿದೆ. ಕಂದಗಲ್ಲು ಸೇರಿದಂತೆ ಇತರೆ ಹಳ್ಳಿಗಳಿಗೆ ನೀರು ತಲುಪಿಲ್ಲ. ಅದೇ ರೀತಿ ಈಗ ತೋಳಹುಣಸೆ ಗ್ರಾಮದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯೋಜನೆ ವಿಫಲವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು’ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ಅಧಿಕಾರಿಗಳು ಎಚ್ಚರ ವಹಿಸಿ ನೀರಿನ ಬವಣೆ ನೀಗಿಸಬೇಕು’ ಎಂದರು.