
ಚಿಕ್ಕಮಗಳೂರು: ತಿಮ್ಮನಹಳ್ಳಿ ಗ್ರಾಮದ 62 ವರ್ಷದ ಮಹಿಳೆಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತಲಿನಲ್ಲಿ, ಭಾನುವಾರ ಮಧ್ಯಾಹ್ನ ಧಾರಾಕಾರವಾಗಿ ಮಳೆ ಸುರಿಯಿತು. ಮಧ್ಯಾಹ್ನ 1.30ರ ವೇಳೆಗೆ ಶುರವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ದೇವರಾಜೇಗೌಡ ಅವರ ಪತ್ನಿ ನಾಗಮ್ಮನವರು, ಆರದವಳ್ಳಿ ಗ್ರಾಮದ ತನ್ನ ಅಳಿಯ ಗಂಗೇಗೌಡ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ, ಮಧ್ಯಾಹ್ನ 2 ಗಂಟೆಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.