

ಹಾವೇರಿ: ಪಾಗಲ್ ಪ್ರೇಮಿಗಳ ಹುಚ್ಚಾಟಗಳು ಬಗ್ಗೆ ನೀವು ಕೇಳಿರುತ್ತೀರಿ, ತಾನು ಪ್ರೀತಿಸುವ ಯುವತಿಗಾಗಿ ಪ್ರಾಣ ಕಳೆದುಕೊಳ್ಳುವ ಪ್ರಯತ್ನ ಮಾಡುವುದಾಗಲಿ, ಇನ್ನೇನು ಅವಾಂತರಗಳನ್ನು ಮಾಡುವವರನ್ನು ನೋಡಿದ್ದೀರಿ. ಆದರೆ ಇಲ್ಲೊಬ್ಬ ಪಾಗಲ್ ಪ್ರೇಮಿ ಹಾಡುಹಗಲೇ ಲೇಡಿಸ್ ಪಿಜಿಗೆ ನುಗ್ಗಿ “ಪ್ರೀತ್ಸೆ, ಪ್ರೀತ್ಸೆ” ಎಂದು ಕೂಗುತ್ತಾ ಕಿರಿಕಿರಿ ಮಾಡಿದ ಘಟನೆ ನಡೆದಿದೆ. ಹಾವೇರಿ ನಗರದಲ್ಲಿರುವ ಈ ಮಹಿಳೆಯರ ಪಿಜಿಗೆ ಹಾಡುಹಗಲೇ ನುಗ್ಗಿದ ಈತ “ಪ್ರೀತ್ಸೆ, ಪ್ರೀತ್ಸೆ” ಎಂದು ಕೂಗುತ್ತಾ, “ಕೈ ಮುಗಿತೀನಿ, ಕಾಲಿಗೆ ಬೀಳ್ತೀನಿ” ಎಂದು ರಂಪಾಟ ಮಾಡಿದ್ದಾನೆ. ಈತನ ಕಿರುಕುಳ ತಾಳಲಾರದೆ ಪಿಜಿಯಲ್ಲಿನ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದಾರೆ. “ಪ್ರೀತ್ಸೆ, ಪ್ರೀತ್ಸೆ” ಎಂದು ಕಿರುಕುಳ ನೀಡುತ್ತಿದ್ದ ಈತನ ಹೆಸರು ಪ್ರಮೋದ್ ಶರಣಪ್ಪ ಎಂದು ತಿಳಿದುಬಂದಿದೆ. ಯುವತಿಯೊಬ್ಬಳು ಈತನ ಪ್ರೀತಿಯನ್ನು ನಿರಾಕರಿಸಿದರೂ ಈತ ಬೆನ್ನು ಬಿದ್ದು ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಈ ವಿಚಿತ್ರ ಪ್ರೇಮಿಯ ವರ್ತನೆಯನ್ನು ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.