
ಹಾವೇರಿ: ರಾಣೇಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ,ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬ್ಯಾಡಗಿ (22) ಎಂಬ ಯುವತಿಯ ಕೊಲೆಯಾಗಿತ್ತು. ಮಾ.6 ರಂದು ಯುವತಿಯ ಮೃತದೇಹ ರಾಣೇಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಪತ್ತೆಯಾಗಿತ್ತು.

ಮೊದಲು ಅಪರಿಚಿತ ಯುವತಿಯ ಶವ ಎಂದು ಹಲಗೇರಿ ಪೊಲೀಸರು ಘೋಷಿಸಿದ್ದರು. ಬಳಿಕ ವಾರಸುದಾರರು ಯಾರೂ ಇಲ್ಲದ ಹಿನ್ನೆಲೆ, ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕಾರ ಸ್ವಾತಿ ಶವವನ್ನು ಹೂತು ಹಾಕಲಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಹತ್ಯೆಯಾಗಿರುವುದು ದೃಢಪಟ್ಟಿದೆ. ರಾಜ್ಯಾದ್ಯಂತ ಹಲವಾರು ಸಂಘಟನೆಗಳಿಂದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಹಾಗೂ ಅವರ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು , ಪ್ರತಿಭಟನೆಯ ಮೂಲಕ ಆಗ್ರಹಿಸಲಾಗಿತ್ತು. ಸ್ವಾತಿ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಸರ್ಕಾರ ಸ್ವಾತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ.