
ಬೆಳಗಾವಿ : ರಾಜ್ಯದಲ್ಲಿ ಆಸ್ತಿ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರವು ಇ-ಖಾತಾ ಅಭಿಯಾನ ಹಮ್ಮಿಕೊಂಡಿದೆ. ಇದಕ್ಕೆ ಉತ್ತಮ ಸ್ಪಂದನೆ ಕೂಡ ವ್ಯಕ್ತವಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದು, ಈ ಪೈಕಿ ಕುಂದಾನಗರಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅತೀ ಹೆಚ್ಚು ಅರ್ಜಿ ಸ್ವೀಕಾರ ಆಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯ ಸರ್ಕಾರ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿಯಿರುವ ಎಲ್ಲ ಆಸ್ತಿಗಳಿಗೆ ಖಾತಾ ನೀಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಇ-ಖಾತಾ ಅಭಿಯಾನಕ್ಕೆ ಬೆಳಗಾವಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲೇ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅತೀ ಹೆಚ್ಚು ಅರ್ಜಿಗಳು ಸ್ವೀಕಾರ ಆಗಿವೆ.

ಬೆಳಗಾವಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಇ-ಖಾತಾ ಅರ್ಜಿ ಸಲ್ಲಿಕೆ ಅವಕಾಶ ಮಾಡಿಕೊಡಲಾಗಿದೆ. ಫೆಬ್ರವರಿ 18ರಿಂದ ಇಲ್ಲಿಯರೆಗೆ ಎ-ಖಾತಾ ಪಡೆಯಲು 1758 ಅರ್ಜಿಗಳು ಬಂದಿದ್ದು, ಪ್ರತಿ ಅರ್ಜಿಗೆ 25 ರೂಪಾಯಿ ನಿಗದಿಪ ಮಾಡಲಾಲಾಗಿದೆ. ಇದರಿಂದ 27,120 ರೂಪಾಯಿ ಅರ್ಜಿ ಶುಲ್ಕದಿಂದ ಸಂಗ್ರಹ ಆಗಿದೆ. ಆದರೆ, ಆಸ್ತಿ ತೆರಿಗೆಯಾಗಿ ಒಟ್ಟು 1,67,55,375 ರೂಪಾಯಿ ಪಾಲಿಕೆಗೆ ಆದಾಯವಾಗಿ ಬಂದಿದೆ. ಅದೇ ರೀತಿ ಬಿ-ಖಾತಾ ಪಡೆಯಲು 174 ಅರ್ಜಿಗಳು ಸ್ವೀಕಾರವಾಗಿದ್ದು, ಅರ್ಜಿ ಶುಲ್ಕ 2850 ರೂಪಾಯಿ ಹಾಗೂ 49,97,597 ರೂಪಾಯಿ ತೆರಿಗೆ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರು ಫೆಬ್ರವರಿ 17ರಂದು ಇ-ಆಸ್ತಿ ತಂತ್ರಾಂಶದ ಮೂಲಕ ಇ-ಖಾತಾ ನೀಡುವ ಪ್ರಮಾಣಿತ ಕಾರ್ಯವಿಧಾನ ಹೊರಡಿಸಿದ್ದಾರೆ. ಅದರಂತೆಯೇ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿಯಿರುವ ಎಲ್ಲಾ ಆಸ್ತಿಗಳಿಗೆ 3 ತಿಂಗಳೊಳಗಾಗಿ ಇ-ಖಾತಾ ನೀಡಲು ನಿರ್ಧರಿಸಲಾಗಿದ್ದು, ಫೆಬ್ರವರಿ 18ರಂದು ರಾಜ್ಯಾದ್ಯಂತ ಈ ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು.

* ಎ-ಖಾತಾ ಎಂದರೆನು: ಎ-ಖಾತಾ ಎಂದರೆ ಅಧಿಕೃತ ಆಸ್ತಿ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು, ಭೂಪರಿವರ್ತನೆ ಮಾಡಿರುತ್ತಾರೆ. ಯೋಜನಾ ವಿನ್ಯಾಸ ನಕ್ಷೆಯ ಅನುಮೋದನೆ ಸಿಕ್ಕಿರುತ್ತದೆ. ಪಾಲಿಕೆಯಿಂದ ಕಟ್ಟಡ ಪರವಾನಗಿ ಪಡೆದಿರುವ ಆಸ್ತಿಗಳಾಗಿವೆ. * ಬಿ-ಖಾತಾ ಎಂದರೇನು? ಬಿ-ಖಾತಾ ಎಂದರೆ ಅನಧಿಕೃತ ಆಸ್ತಿ, ಕಂದಾಯ ಬಡಾವಣೆಯಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ ಮಾಡಿರುವುದು.
ಎ-ಖಾತಾಗೆ ಯಾವೆಲ್ಲಾ ದಾಖಲೆಗಳು ಬೇಕು?
* ಎ ರಿಜಿಸ್ಟರ್ನಲ್ಲಿ ದಾಖಲಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ಮಂಜೂರಾತಿ * ಪತ್ರಗಳು/ಕಂದಾಯ ಇಲಾಖೆಯಿಂದ 94 ಸಿ.ಸಿ. ಅಡಿ ನೀಡಲಾದ ಹಕ್ಕು ಪತ್ರ.
* ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ
* ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ
* ಈಗಿನ ಆಸ್ತಿ ತೆರಿಗೆ ಪಾವತಿ ರಶೀದಿ
* ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ
* ಮಾಲೀಕರ ಗುರುತಿನ ದಾಖಲೆ ಪ್ರತಿ
ಬಿ-ಖಾತಾಗೆ ಯಾವೆಲ್ಲಾ ದಾಖಲೆಗಳು ಬೇಕು?
* ಬಿ ರಿಜಿಸ್ಟರ್ನಲ್ಲಿ ದಾಖಲಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ ಮಾರ್ಚ್ 10, 2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಪತ್ರಗಳು.
* ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ
* ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ
* ಮಾಲೀಕರ ಫೋಟೋ ಹಾಗೂ ಸ್ವತ್ತಿನ ಫೋಟೋ
* ಮಾಲೀಕರ ಗುರುತಿನ ದಾಖಲೆ ಪ್ರತಿ