
ಚಿತ್ರದುರ್ಗ: ಹಾವೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಹಾಗೂ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆಗಿರುವ ರುದ್ರಪ್ಪ ಲಮಾಣಿಯವರು ಶುಕ್ರವಾರ ಸಂಜೆ ಅಧಿವೇಶನ ಮುಗಿಸಿಕೊಂಡು ಬೆಂಗಳೂರಿನಿಂದ ಸ್ವಕ್ಷೇತ್ರ ಹಾವೇರಿಗೆ ತೆರಳುತ್ತಿದ್ದರು. ಆದ್ರೆ, ಎಳ್ಳನೀರು ಕುಡಿಯಲೆಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜೆಜೆ ಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರನ್ನು ಸೈಡಿಗೆ ಹಾಕಿ ಇಳಿದಿದ್ದಾರೆ. ನಂತರ ಮೂತ್ರ ವಿಸರ್ಜನೆ ಹೋಗಲು ರಸ್ತೆ ದಾಟುವ ವೇಳೆ ವೇಗವಾಗಿ ಬಂದ ಬೈಕ್ ಶಾಸಕರಿಗೆ ಡಿಕ್ಕಿ ಹೊಡೆದಿದೆ.

ಎಸ್.ಎಸ್ ಆಸ್ಪತ್ರೆಯಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸಿಟಿ ಸ್ಕ್ಯಾನ್ ಸೇರಿದಂತೆ ಇತರೆ ಚಿಕಿತ್ಸೆ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿದು ಬಂದಿತ್ತು. ಆದ್ರೆ, ಇಂದು (ಮಾರ್ಚ್ 15) ಬೆಳಗ್ಗೆ ಏಕಾಏಕಿ ದಾವಣಗೆರೆ ಎಸ್.ಎಸ್ ಆಸ್ಪತ್ರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ರುದ್ರಪ್ಪ ಲಮಾಣಿ ಅವರ ಆರೋಗ್ಯದ ಬಗ್ಗೆ ವೈದ್ಯರಾಗಲಿ, ಅವರ ಕುಟುಂಬಸ್ಥರಾಗಲಿ ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ.