
ಬೆಂಗಳೂರು ಗ್ರಾಮಾಂತರ: ಅಜ್ಜಿಯ ತಿಥಿ ಕಾರ್ಯಕ್ಕೆ ಹೋದವರಿಗೆ ಕಳ್ಳರು ಶಾಕ್ ನೀಡಿದ್ದಾರೆ. ಅತ್ತ ಹಳೆ ಮನೆಯಲ್ಲಿ ಮನೆ ಮಂದಿಯೆಲ್ಲಾ ಸೇರಿ ಅಜ್ಜಿಯ ತಿಥಿ ಕಾರ್ಯ ಮಾಡುತ್ತಿದ್ದರೆ, ಇತ್ತ ಕಳ್ಳರು ಮಾತ್ರ ಹೊಸ ಮನೆಯಲ್ಲಿದ್ದ 240 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಆಡೆಸೊಣ್ಣಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೇ 2ನೇ ತಾರೀಖು ರಾತ್ರಿ ಪ್ರೇಮಾ ಎಂಬುವವರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 240 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಪ್ರೇಮಾ ಅವರು ಮಗಳ ಮದುವೆಗಾಗಿ 240 ಗ್ರಾಂ ಚಿನ್ನ ಖರೀದಿಸಿದ್ದರು ಎಂದು ತಳಿದು ಬಂದಿದೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

j3tvkannada
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸೂರ್ಯನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸುಧಾಕರ್ (37) ಆಜಯ್ (36), ಅರವಿಂದ್ ಬಂಧಿತರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, 9 ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ 9 ಪ್ರಕರಣಗಳಲ್ಲಿ ಒಂದು ಕೆಜಿಗೂ ಅಧಿಕ ಚಿನ್ನ ಕದ್ದಿದ್ದಾರೆ. ಆದರೆ ಇಲ್ಲಿಯವರೆಗೆ 290 ಗ್ರಾಂ ಚಿನ್ನ ಮಾತ್ರ ರಿಕವರಿಯಾಗಿದೆ. ಮಗಳ ಮದುವೆಗಾಗಿ ಖರೀದಿಸಿದ್ದ ಒಡವೆ ಕಳೆದುಕೊಂಡ ಪ್ರೇಮಾ ಕಣ್ಣೀರು ಹಾಕಿದ್ದು, ಒಡವೆ ಇಲ್ಲದೆ ನಿಶ್ಚಯವಾಗಿದ್ದ ಮದುವೆ ಮುಂದೂಡಿದ್ದಾರೆ. ಆದಷ್ಟು ಬೇಗ ಒಡವೆ ರಿಕವರಿ ಮಾಡಿ ಕೊಡುವಂತೆ ಪ್ರೇಮ ಅವರು ಪೊಲೀಸರಿಗೆ ಮನವಿ ಮಾಡಿದ್ದರು. ಇದೀಗ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ.