
ತುಮಕೂರು:ಜಿಲ್ಲೆಯ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಟ್ನ ಗ್ರಾಮದ ಹೊರ ವಲಯದ ತೋಪಿನಲ್ಲಿ ವಾಮಾಚಾರ ಮಾಡಿ, ಶಕ್ತಿ ದೇವತೆ ಕೆಂಪಮ್ಮ ದೇವಿ ದೇವಾಲಯದ ಬಾಗಿಲಿಗೆ ಹಾಕಿದ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಮಂಗಳವಾರ ಸಂಜೆ ಯಾರೂ ಇಲ್ಲದ್ದನ್ನು ಗಮನಿಸಿ ಪಶ್ಚಿಮದ ಬಾಗಿಲಿಗೆ ವಾಮಾಚಾರ ಮಾಡಿದ್ದಾರೆ. ನಂತರ ವಾಮಾಚಾರದ ವಸ್ತುಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಸಂಪೂರ್ಣವಾಗಿ ಬಾಗಿಲಿಗೆ ಬೆಂಕಿ ಆವರಿಸಿದೆ.
ಇಂದು ಬೆಳಗ್ಗೆ ಪೂಜಾ ಕೈಂಕರ್ಯಗಳನ್ನು ನಡೆಸಲು ಪುರೋಹಿತರು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ವಾಮಾಚಾರದಿಂದಾಗಿ ದೇವಸ್ಥಾನದ ಬಾಗಿಲು ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳದಲ್ಲಿ ವಾಮಾಚಾರಕ್ಕೆ ಬಳಸಿದ್ದ ಬೊಂಬೆ, ಕುಂಕುಮ, ತಾಮ್ರದ ತಗಡು ಮುಂತಾದ ವಸ್ತುಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸ್ಥಳಕ್ಕೆ ಕಿಬ್ಬನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.