
ಮಡಿಕೇರಿ: ದೇಶಾದ್ಯಂತ ಆಗಾಗ ಹವಾಮಾನ ವೈಪರೀತ್ಯ ಉಂಟಾಗುವಂತೆ ಅಪರೂಪಕ್ಕೊಮ್ಮೆ ಭೂಮಿ ಕಂಪನಕ್ಕೊಳಗಾಗುವುದೂ ಇದೆ. ಇದೀಗ ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮಡಿಕೇರಿ ತಾಲೂಕಿನ ಮದೆನಾಡು, 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ.
ಬೆಳಗ್ಗೆ 10.50 ರ ಸುಮಾರಿಗೆ ತೀರಾ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ವಿಚಾರದ ಬಗ್ಗೆ ಭೂ ವಿಜ್ಞಾನಿಗಳಿಗೆ ಮಾಹಿತಿ ನೀಡಲು ಗ್ರಾಮ ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆ.

ಮಡಿಕೇರಿ ತಾಲೂಕಿನ ಕೆಲವು ಪ್ರದೇಶಗಳು ಸೇರಿದಂತೆ ಕೊಡಗು ಜಿಲ್ಲೆಯ ಹಲವೆಡೆ ಮಂಗಳವಾರ ಬೆಳಗ್ಗೆ ಲಘು ಭೂಕಂಪನದ ಅನುಭವವಾಗಿದೆ. ಸದ್ಯ ಈ ಬಗ್ಗೆ ಅಧಿಕಾರಿಗಳು ಭೂವಿಜ್ಞಾನಿಗಳಿಗೆ ಮಾಹಿತಿ ನೀಡಲು ಮುಂದಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ರೀತಿಯಲ್ಲಿ ಹಾನಿ, ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಭೂಮಿಯೊಳಗೆ ಏಳು ಟೆಕ್ಟೋನಿಕ್ ಪ್ಲೇಟ್ಗಳಿವೆ ಎನ್ನಲಾಗಿದೆ. ಈ ಟೆಕ್ಟೋನಿಕ್ ಪ್ಲೇಟ್ಗಳು ನಿರಂತರವಾಗಿ ಸುತ್ತುತ್ತಿರುತ್ತವೆ. ಇವುಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಭೂಕಂಪ ಸಂಭವಿಸುತ್ತದೆ. ಟೆಕ್ಟೋನಿಕ್ ಪ್ಲೇಟ್ಗಳು ಡಿಕ್ಕಿಯಾಗಿ ಒಂದರ ಮೇಲೊಂದು ಹತ್ತಿದಾಗ ಅಥವಾ ದೂರ ಸಂಚರಿಸಿದಾಗ ನೆಲ ಅಲುಗಾಡಲು ಪ್ರಾರಂಭವಾಗುತ್ತದೆ. ಇದನ್ನು ಭೂಕಂಪ ಎಂದು ಕರೆಯಲಾಗುತ್ತದೆ. ಭೂಕಂಪಗಳನ್ನು ಅಳೆಯಲು ರಿಕ್ಟರ್ ಮಾಪಕವನ್ನು ಬಳಸಲಾಗುತ್ತದೆ. ಇದನ್ನು ರಿಕ್ಟರ್ ಮ್ಯಾಗ್ನಿಟ್ಯೂಡ್ ಮಾಪಕ ಎಂದು ಕರೆಯಲಾಗುತ್ತದೆ.