
ಬೆಳಗಾವಿ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, 10 ತಿಂಗಳಲ್ಲಿ ಅಬಕಾರಿ ಇಲಾಖೆ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಸಾವಿರಾರು ಲೀಟರ್ ಅಕ್ರಮ ಮದ್ಯ ಜಪ್ತಿಯಾಗಿದೆ. ಅದರಲ್ಲಿ 5 ಸಾವಿರಕ್ಕೂ ಅಧಿಕ ಲೀಟರ್ ‘ಡಿಫೆನ್ಸ್ ಮದ್ಯ’ ಪತ್ತೆಯಾಗಿರುವುದು ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿಯಂತಿದೆ. ಅಕ್ರಮ ಮದ್ಯ ಮಾರಾಟ ಹಾಗೂ ಬಾರ್ಗಳಲ್ಲಿ ನಿಗದಿತ ಸಮಯ ಮೀರಿ ತಡರಾತ್ರಿವರೆಗೂ ಮದ್ಯ ಮಾರಾಟ ಮಾಡುತ್ತಿರುವುದು ಮತ್ತು ಧಾರ್ಮಿಕ ತಾಣಗಳಲ್ಲಿ ಮದ್ಯ ಬಳಕೆ ಕುರಿತು ಸಾರ್ವಜನಿಕರು, ನಾನಾ ಸಂಘ ಸಂಸ್ಥೆಗಳಿಂದ ಅಧಿಕಾರಿಗಳಿಗೆ ವ್ಯಾಪಕ ದೂರುಗಳು ಬಂದಿದ್ದವು.

j3tvkannada.in
ಈ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತ ಮುಂಚೆಯೇ ಮದ್ಯ ಮಾರಾಟ ಮಳಿಗೆ ತೆರೆದು ಮದ್ಯ ಮಾರಾಟ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದ್ದಾರೆ. ಅಕ್ರಮವಾಗಿ ಮದ್ಯ ಸಾಗಾಟ, ಮಾರಾಟ ಮಾಡುತ್ತಿದ್ದವರ ಮೇಲೂ ದಾಳಿ ನಡೆಸಲಾಗಿದೆ. 2024ರ ಜು. 1ರಿಂದ 2025ರ ಮೇ 30 ರ ವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1,925 ಪ್ರಕರಣ ದಾಖಲಿಸಿಕೊಂಡು, 35,672.20 ಲೀಟರ್ ಮದ್ಯ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 5,764 ಲೀಟರ್ ಡಿಫೆನ್ಸ್ ಮದ್ಯ ಜಪ್ತಿ ಮಾಡಲಾಗಿದೆ. ರಾಜ್ಯದಲ್ಲಿಯೇ ಮಿಲಿಟರಿ ಮದ್ಯ ಅಕ್ರಮ ಮಾರಾಟ ಅತಿ ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿರುವುದು ಬೆಳಗಾವಿಯಲ್ಲೇ ಎನ್ನುವುದು ಆತಂಕಕಾರಿ ವಿಷಯ. ಬೆಳಗಾವಿ ಜಿಲ್ಲೆಯಲ್ಲಿ ಮಿಲಿಟರಿ ಕ್ಯಾಂಪ್ ಪ್ರದೇಶ ಇರುವುದರಿಂದ ಇಲ್ಲಿ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ಮೆಂಟ್ (ಸಿಎಸ್ಡಿ) ಇದೆ. ನಿವೃತ್ತ ಹಾಗೂ ವೃತ್ತಿಯಲ್ಲಿರುವ ಮಿಲಿಟರಿ ಸೈನಿಕರಿಗೆ ಹಾಗೂ ಸೇನಾಧಿಕಾರಿಗಳಿಗೆ ಗುರುತಿನ ಚೀಟಿ ಪರಿಶೀಲಿಸಿ, ಮಿಲಿಟರಿ ಕ್ಯಾಂಟೀನ್ನಲ್ಲಿ ರಿಯಾಯತಿ ದರದಲ್ಲಿ ನಿಗದಿತ ಪ್ರಮಾಣದಲ್ಲಿ ಬ್ರ್ಯಾಂಡೆಡ್ ಮದ್ಯ ನೀಡಲಾಗುತ್ತಿದೆ. ಮದ್ಯ ಸೇವನೆ ಮಾಡದ ಕೆಲವರು ಖರೀದಿಸಿ ಬೇರೆಯವರಿಗೆ ನೀಡುತ್ತಾರೆ.
ಇಂಥವರು ಡಿಫೆನ್ಸ್ ಕೋಟಾ ದುರ್ಬಳಕೆ ಮಾಡಿಕೊಂಡು ಹೊರಗಡೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಖಾಲಿಯಾದ ಬ್ರ್ಯಾಂಡೆಡ್ ಬಾಟಲ್ಗಳಿಗೆ ಕಡಿಮೆ ಬೆಲೆಯ ಮದ್ಯ ತುಂಬಿಸಿ ಮಿಲಿಟರಿ ಬ್ರ್ಯಾಂಡ್ ಎಂದು ಅಕ್ರಮವಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದೂ ಬೆಳಕಿಗೆ ಬಂದಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡ ಸೇರಿ ಇತರ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಹೆಚ್ಚಾಗಿ ಅಕ್ರಮ ಮದ್ಯ ಮಾರಾಟ ಮಾಡುವ ದೂರುಗಳು ಕೇಳಿ ಬಂದಿವೆ. ಹೀಗಾಗಿ ಅಬಕಾರಿ ಇಲಾಖೆಯ ಪೊಲೀಸರು ಜಿಲ್ಲೆಯ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರಗಳ ಮೇಲೂ ಹದ್ದಿನ ಕಣ್ಣಿಟ್ಟಿದ್ದು, ಜಿಲ್ಲೆಯಲ್ಲಿಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 1,541 ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಜತೆಗೆ ಅಕ್ರಮ ಮದ್ಯ ಸಾಗಾಟಕ್ಕೆ ಬಳಸಲಾಗಿದ್ದ 58 ದ್ವಿಚಕ್ರ ಹಾಗೂ ತ್ರಿ ಚಕ್ರ ವಾಹನ , ನಾಲ್ಕು ಚಕ್ರದ ವಾಹನ – 10, ಏಳು ಭಾರೀ ವಾಹನ ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ವಲಯದ ದಕ್ಷಿಣ ಭಾಗದಲ್ಲಿ917 ಮತ್ತು ಉತ್ತರದಲ್ಲಿ1,008 ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಾಖಲಾಗಿವೆ. ಅಂತಾರಾಜ್ಯ ಜಾಲಗಳು ಕಳ್ಳ ಮಾರ್ಗದಲ್ಲಿ ಸಾಗಿಸಲಾಗುತ್ತಿದ್ದ 4,314.945 ಲೀಟರ್ ನಿಷೇಧಿತ ಮದ್ಯ, 109 ಲೀಟರ್ ಬಿಯರ್ ಸೇರಿದಂತೆ ವಿವಿಧ ಕಂಪನಿಗಳ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ. ಇದರಲ್ಲಿ ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವೇ ಹೆಚ್ಚು ಪತ್ತೆಯಾಗಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಜಿಲ್ಲೆಯ ಗ್ರಾಮೀಣ ಭಾಗದ ಕೆಲವೆಡೆ ಅಧಿಕೃತ ಬಾರ್, ಮದ್ಯ ಮಾರಾಟ ಮಳಿಗೆಗಳಿಲ್ಲ. ಹಾಗಾಗಿ, ಹಳ್ಳಿಗಳಲ್ಲಿರುವ ಕೆಲ ಕಿರಾಣಿ ಅಂಗಡಿ, ಮನೆ, ಹೊಟೇಲ್ಗಳಲ್ಲಿ ಹೆಚ್ಚಿನ ದರಕ್ಕೆ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ.
ಸಮೀಪದ ಬಾರ್ ಹಾಗೂ ಮದ್ಯ ಮಾರಾಟ ಮಳಿಗೆಗಳಿಂದ ಮೂಲ ದರದಲ್ಲಿ ಮದ್ಯ ಖರೀದಿಸಿ ತರುವ ವ್ಯಾಪಾರಿಗಳು ಅಕ್ರಮವಾಗಿ 20 ರಿಂದ 50 ರೂ.ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಾರೆ. ಕೂಲಿ ಕಾರ್ಮಿಕರು ಹಾಗೂ ಅಲ್ಪ ಆದಾಯದ ಕುಟುಂಬಗಳು ಇದರಿಂದ ರೋಸಿ ಹೋಗಿವೆ. ಗ್ರಾಮೀಣ ಭಾಗದಲ್ಲಿ ಮದ್ಯ ಸೇವಿಸುವವರ ಪ್ರಮಾಣ ಅದರಲ್ಲೂ ಯುವಕರಲ್ಲಿ ಗಣನೀಯವಾಗಿ ಹೆಚ್ಚುತ್ತಿದ್ದು, ವ್ಯಸನಿಗಳ ಆರ್ಥಿಕ, ಸಾಮಾಜಿಕ ಹಾಗೂ ಕೌಟುಂಬಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಅಕ್ರಮ ಮದ್ಯ ಮಾರಾಟ ಖಂಡಿಸಿ ಹಲವೆಡೆ ನೊಂದ ಮಹಿಳೆಯರು ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲಎಂದು ಸಮಾಜ ಸೇವಕರು ದೂರಿದ್ದಾರೆ.
ಜಿಲ್ಲೆಯಲ್ಲಿಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ದೂರುಗಳು ಬಂದ ಕಡೆ ತಕ್ಷಣ ದಾಳಿ ನಡೆಸಿ ಅಕ್ರಮ ಮದ್ಯ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಿಯಮ ಉಲ್ಲಂಘಿಸುವ ಮದ್ಯ ಮಳಿಗೆಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗಿದೆ ಎಂದಿದ್ದಾರೆ ವಿಜಯ ಹಿರೇಮಠ, ಎಸ್ಪಿ, ಅಬಕಾರಿ ಇಲಾಖೆ.