
ಉಡುಪಿ: ಬೃಹತ್ ಟ್ಯಾಂಕ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಿನ್ನಿಮುಲ್ಕಿ ಜಂಕ್ಷನ್ ಬಳಿ ನಡೆದಿದೆ.

j3tvkannada
ಮಂಗಳೂರಿನ ಕಡೆಗೆ ಹೋಗುವ ಹೆದ್ದಾರಿಯೊಂದಿಗೆ ಸರ್ವಿಸ್ ರಸ್ತೆ ವಿಲೀನಗೊಳ್ಳುವ ಜಂಕ್ಷನ್ನಲ್ಲಿ ಈ ಅವಘಡ ಸಂಭವಿಸಿದೆ. ಹೆದ್ದಾರಿ ಬಳಿ ಅಳವಡಿಸಲಾಗಿದ್ದ ರಸ್ತೆ ಸೂಚನಾ ಫಲಕವೊಂದು ಲಾರಿಯ ಚಲನೆಗೆ ಅಡ್ಡಿಯಾಗಿದ್ದರಿಂದ ಚಾಲಕನಿಗೆ ಮುಂದೆ ಸಾಗಲು ಕಷ್ಟವಾಯಿತು ಎನ್ನಲಾಗಿದೆ. ಚಾಲಕ ಎರಡು ದಿನಗಳಿಂದ ಇದೇ ಸ್ಥಳದಲ್ಲಿ ಲಾರಿಯನ್ನು ನಿಲ್ಲಿಸಿದ್ದು, ಪರ್ಯಾಯ ಮಾರ್ಗದಲ್ಲಿ ಸಾಗಲು ವಾಹನವನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ, ಸಾಗಿಸುತ್ತಿದ್ದ ಬೃಹತ್ ಟ್ಯಾಂಕ್ ರಸ್ತೆಗೆ ಉರುಳಿದೆ.
ಪಲ್ಟಿಯಾದ ಟ್ಯಾಂಕ್ ಆ ಪ್ರದೇಶದಲ್ಲಿ ಸಂಚಾರಕ್ಕೆ ಭಾರಿ ಅಡೆತಡೆ ಉಂಟುಮಾಡಿತ್ತು. ವಾಹನಗಳ ಸುಗಮ ಸಂಚಾರಕ್ಕಾಗಿ ಹಾಗೂ ವಾಹನ ದಟ್ಟಣೆ ತಪ್ಪಿಸಲು ತಕ್ಷಣವೇ ವಾಹನವನ್ನು ರಸ್ತೆಯಿಂದ ತೆರವುಗೊಳಿಸುವಂತೆ ಲಾರಿ ಚಾಲಕನಿಗೆ ಉಡುಪಿ ಸಂಚಾರ ಪೊಲೀಸರು ಸೂಚಿಸಿದ್ದಾರೆ.