ಬೆಂಗಳೂರು: ಕ್ಷೇತ್ರ ಮರು ವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ. ಇದು ದಕ್ಷಿಣದ ರಾಜ್ಯಗಳಲ್ಲಿ ಗೊಂದಲ ಹುಟ್ಟಿಸುವ ದುರುದ್ದೇಶದಿಂದ ಕೂಡಿದೆ ಎಂದು ಸಿ ಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ಕೇಂದ್ರ ಗೃಹ ಸಚಿವರ ಈ ಹೇಳಿಕೆಯನ್ನು ನೋಡಿದರೆ ಅವರಿಗೆ ಒಂದೋ ಮಾಹಿತಿಯ ಕೊರತೆ ಇದೆ, ಇಲ್ಲವಾದರೆ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶಗಳಿಗೆ ಅನ್ಯಾಯ ಮಾಡುವ ದುರುದ್ದೇಶ ಇದೆ ಎಂದು ಅರ್ಥಮಾಡಿಕೊಳ್ಳಬಹುದು ಎಂದಿದ್ದಾರೆ.

ಕಳೆದ 50 ವರ್ಷಗಳಲ್ಲಿ ದಕ್ಷಿಣದ ರಾಜ್ಯಗಳು ಪರಿಣಾಮಕಾರಿ ಕ್ರಮಗಳ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಿರುವುದು ಮಾತ್ರವಲ್ಲ, ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುತ್ತಿವೆ. ಇದೇ ವೇಳೆ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶದಂತಹ ಉತ್ತರದ ರಾಜ್ಯಗಳು ಜನಸಂಖ್ಯೆಯ ನಿಯಂತ್ರಣದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದು ಮಾತ್ರವಲ್ಲ, ಅಭಿವೃದ್ದಿಯ ಹಾದಿಯಲ್ಲಿ ಇನ್ನೂ ಕುಂಟುತ್ತಾ ಸಾಗಿದೆ ಎಂದಿದ್ದಾರೆ. ಇದರಿಂದಾಗಿ ಕ್ಷೇತ್ರ ಮರು ವಿಂಗಡಣೆಯನ್ನು ಇತ್ತೀಚಿನ ಜನಗಣತಿಯಿಂದ ಪಡೆದ ಜನಸಂಖ್ಯೆಯ ಅನುಪಾತದ ಮೇಲೆ ನಡೆಸಿದರೆ ಜನಸಂಖ್ಯೆಯ ನಿಯಂತ್ರಣ ಮಾಡಿರುವ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಒಂದೋ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಉತ್ತರದ ರಾಜ್ಯಗಳ ಕ್ಷೇತ್ರಗಳ ಪ್ರಮಾಣದಲ್ಲಿ ಏರಿಕೆ ಆಗಲಾರದು. ಈ ಎರಡೂ ಬೆಳವಣಿಗೆಗಳಿಂದ ದಕ್ಷಿಣದ ರಾಜ್ಯಗಳೇ ನಷ್ಟ ಅನುಭವಿಸಲಿವೆ ಎನ್ನುವುದು ಅಮಿತ್ ಶಾ ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡಬಾರದೆಂಬ ಸದುದ್ದೇಶ ಕೇಂದ್ರ ಸರ್ಕಾರ ಹೊಂದಿರುವುದಾಗಿದ್ದರೆ ಕ್ಷೇತ್ರ ಮರು ವಿಂಗಡಣೆಯನ್ನು ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಮಾಡಲಾಗುವುದೋ? ಇಲ್ಲವೇ ಲೋಕಸಭಾ ಸದಸ್ಯರ ಈಗಿನ ಸಂಖ್ಯೆಯ ಅನುಪಾತದಲ್ಲಿ ಮಾಡಲಾಗುವುದೋ? ಎಂಬ ಮುಖ್ಯ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇತ್ತೀಚಿನ ಜನಸಂಖ್ಯೆಯ ಅನುಪಾತದಲ್ಲಿ ಕ್ಷೇತ್ರ ಮರು ವಿಂಗಡಣೆ ನಡೆಸಿದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಕಟ್ಟಿಟ್ಟ ಬುತ್ತಿ ಎನ್ನುವುದು ನಮಗೆ ಅರ್ಥವಾಗಿದೆ. ಈ ಅನ್ಯಾಯವನ್ನು ತಪ್ಪಿಸಲಿಕ್ಕಾಗಿಯೇ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಹಿಂದಿನ ಎರಡು ಕ್ಷೇತ್ರ ಮರು ವಿಂಗಡಣೆಗೆ 1971ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.