
ಚಿಕ್ಕಬಳ್ಳಾಪುರ: ಪ್ರೀತಿಗೆ ಜಾತಿ ಧರ್ಮದ ಗಡಿ ಇಲ್ಲ ಎಂಬಂತೆಯೇ ಇಲ್ಲೊಂದು ಜೋಡಿ ಜಾತಿ ಧರ್ಮಗಳ ಎಲ್ಲೆ ಮೀರಿ ಪ್ರೇಮ ವಿವಾಹವಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

j3tvkannada
ಮುಸ್ಲಿಂ ಯುವತಿಯು ಹಿಂದೂ ಯುವಕನನ್ನು ಪ್ರೀತಿಸಿ ಪ್ರೇಮ ವಿವಾಹವಾಗಿದ್ದು ಈ ವಿವಾಹಕ್ಕೆ ಸಹಜವಾಗಿಯೇ ಪೋಷಕರ ವಿರೋಧ ವ್ಯಕ್ತವಾಗಿದೆ. ಇದೀಗ ರಕ್ಷಣೆ ಕೋರಿ ನವ ಜೋಡಿಯು ಪೊಲೀಸರ ಮೊರೆ ಹೋಗಿದ್ದಾರೆ. ಯಾಪಲಹಳ್ಳಿಯ ನಿವಾಸಿ ಹರೀಶ್ ಬಾಬು ಹಾಗೂ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದ ಯುವತಿ ನಜ್ಮಾ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರದ್ದು ಬೇರೆ ಬೇರೆ ತಾಲೂಕಾದರೂ ಚಿಕ್ಕಬಳ್ಳಾಪುರ ನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಪರಿಚಯ ಆಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿದೆ.
ಕಳೆದ 4 ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರಿಗೂ ವ್ಯಕ್ತಿತ್ವ ಇಷ್ಟವಾಗಿ ಮದುವೆ ಆಗಲು ತೀರ್ಮಾನಿಸಿದ್ದರು. ಮದುವೆಗೆ ಮನೆಯವರು ಒಪ್ಪದ ಕಾರಣ ಇಬ್ಬರು ಪ್ರೇಮ ವಿವಾಹವಾಗಿದ್ದರು. ಈ ಮದುವೆಗೆ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.
ವಿರೋಧದ ಬೆನ್ನಲ್ಲೇ ನವಜೋಡಿ ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸಿ ಮೊರೆ ಹೋಗಿದ್ದಾರೆ. ಅಂತರ್ ಧರ್ಮ ಪ್ರೇಮ ವಿವಾಹದ ಸೂಕ್ಷ್ಮತೆಯನ್ನ ಅರಿತ ಎಸ್ಪಿ ಕುಶಲ್ ಚೌಕ್ಸಿ ಇಬ್ಬರನ್ನ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಕಳುಹಿಸಿದ್ದು, ಯುವಕ ಯುವತಿಯ ತಂದೆ ತಾಯಿಯನ್ನ ಕರೆಸಿ ವಿಚಾರ ಮಾಡುವಂತೆ ತಿಳಿಸಿದ್ದರು.
ಠಾಣೆಗೆ ಬಂದ ಯುವತಿ ಪೋಷಕರು ಹಾಗೂ ಸಂಬಂಧಿಕರು ಯುವಕನನ್ನ ಬಿಟ್ಟು ಬರುವಂತೆ ಬೇಡಿಕೊಂಡಿದ್ದರು. ಇದಕ್ಕೆ ಯುವತಿ ಒಪ್ಪಿರಲಿಲ್ಲ. ಹೀಗಾಗಿ ಎರಡು ಕಡೆಯವರನ್ನ ಕರೆಸಿ ಪೊಲೀಸರು ವಿಚಾರಣೆ ಮಾಡಿದ್ದು, ಯುವತಿ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ನವಜೋಡಿಗೆ ಯಾವುದೇ ತೊಂದರೆ ಮಾಡದಂತೆ ತಿಳಿ ಹೇಳಿ ಕಳುಹಿಸಿದ್ದಾರೆ.