
ಬೆಂಗಳೂರು: ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿಗಳ ದತ್ತಾಂಶ ಸಂಗ್ರಹಕ್ಕೆ ನಡೆಸಲಿರುವ ಸಮೀಕ್ಷೆಯಲ್ಲಿ, ಜಾತಿ ತಾರತಮ್ಯ ಕುರಿತಾದ ಮಾಹಿತಿಗಳನ್ನೂ ಕಲೆ ಹಾಕಲಾಗುತ್ತದೆ.

j3tvkannada
ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗವು, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ರೂಪುರೇಷೆಗಳನ್ನು ಸಿದ್ಧಪಡಿಸಿದೆ.
ಮನೆ-ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲು ಆ್ಯಂಡ್ರಾಯ್ಡ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಪರಿಶಿಷ್ಟ ಜಾತಿಗಳ ಜನರು, ಜಾತಿಯ ಕಾರಣಕ್ಕೆ ಸಾಮಾಜಿಕ ತಾರತಮ್ಯಕ್ಕೆ ಗುರಿಯಾದುದರ ಬಗ್ಗೆ ಮಾಹಿತಿ ಕಲೆ ಹಾಕಲೂ ಈ ಆ್ಯಪ್ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇದಕ್ಕಾಗಿ ಆ್ಯಪ್ನ 16ನೇ ವಿಂಡೋವನ್ನು ಮೀಸಲಿಡಲಾಗಿದೆ. ಸಮೀಕ್ಷೆಗೆ ಒಳಪಡುವವರು ಆಧಾರ್/ಪಡಿತರ ಚೀಟಿ ನೀಡಿ ನೋಂದಣಿ ಮಾಡಿಕೊಂಡ ನಂತರ ಅವರ ಮತ್ತು ಕುಟುಂಬದವರ ವೈಯಕ್ತಿಕ ವಿವರ ಸಂಗ್ರಹಿಸಲಾಗುತ್ತದೆ.
ಕುಟುಂಬದ ಸದಸ್ಯರ ವಿವರ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಸರ್ಕಾರಿ ಸವಲತ್ತುಗಳು, ಮೂಲಸೌಕರ್ಯಗಳು ಸೇರಿ ಸಮಗ್ರ ಮಾಹಿತಿಯನ್ನು ಕಲೆ ಹಾಕಲು ಈ ಆ್ಯಪ್ನಲ್ಲಿ ಒಟ್ಟು 17 ವಿಂಡೋಗಳನ್ನು ರೂಪಿಸಲಾಗಿದೆ.
16ನೇ ವಿಂಡೋವಿನಲ್ಲಿ ಕುಟುಂಬವು ಯಾವುದಾದರೂ ಸಾಮಾಜಿಕ ತಾರತಮ್ಯಕ್ಕೆ ಗುರಿಯಾಗಿದೆಯೇ ಎಂಬ ಪ್ರಶ್ನೆ ಇದೆ. ಸಮೀಕ್ಷೆ ನಡೆಸುವವರು ಈ ಪ್ರಶ್ನೆ ಕೇಳಿದಾಗ ಕುಟುಂಬದವರು ಹೌದು ಎಂದು ಉತ್ತರಿಸಿದರೆ. ತಾರತಮ್ಯದ ಸ್ವರೂಪವನ್ನು ವಿವರಿಸುವ ಉಪವಿಂಡೋ ತೆರೆದುಕೊಳ್ಳುತ್ತದೆ. ಇದರಲ್ಲಿ 15 ಸ್ವರೂಪದ ತಾರತಮ್ಯಗಳನ್ನು ಆಯ್ಕೆ ಮಾಡಲು ಅವಕಾಶವಿದೆ.