ಕಾರವಾರ: ವಿದ್ಯಾರ್ಥಿ ಜೀವನದಲ್ಲಿ ಹಲವಾರು ಮಕ್ಕಳು ಅನೇಕ ಕನಸುಗಳನ್ನು ಕಾಣುವುದು ಸಾಮಾನ್ಯ ಅದರಂತೆ ಇಲ್ಲೊಬ್ಬ ವಿದ್ಯಾರ್ಥಿನಿ ತಾನು ಡ. ಸಿ ಆಗಬೇಕು ಎಂಬ ಕನಸು ಕಂಡಿದ್ದಾಳೆ ಅದನ್ನು ಜಿಲ್ಲಧಿಕಾರಿ ಬಳಿ ಹೇಳಿಕೊಂಡಿದ್ದಾಳೆ, ನಾನು ನಿಮ್ಮ ಹಾಗೆ ಜಿಲ್ಲಾಧಿಕಾರಿಯಾಗಬೇಕು ಎಂದ ವಿದ್ಯಾರ್ಥಿನಿಯನ್ನು ತಮ್ಮ ಕುರ್ಚಿಯಲ್ಲಿ ಕೂರಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ ಅವರು ಪ್ರೇರಣೆ ನೀಡಿದ್ದಾರೆ.

ಪ್ರತಿಯೊಬ್ಬರಿಗೂ ಜೀವನದಲ್ಲಿ ತಮ್ಮದೇ ಆದ ಗುರಿ ಮತ್ತು ಕನಸುಗಳಿರುತ್ತವೆ. ಅವುಗಳನ್ನು ನನಸು ಮಾಡಿಕೊಳ್ಳಲು ಸತತ ಪರಿಶ್ರಮಪಟ್ಟರೂ ಹಲವು ಬಾರಿ ಅವುಗಳ ಸಮೀಪ ತೆರಳಿ ನಿರೀಕ್ಷಿತ ಸಾಧನೆಯಿಂದ ವಿಮುಖರಾಗುವ ಸಾಧ್ಯತೆಗಳೇ ಹೆಚ್ಚು. ಆದರೆ ತನ್ನ ಗುರಿಯ ಆಶಯ ಹೇಳಿಕೊಂಡ ವಿದ್ಯಾರ್ಥಿನಿಗೆ ಕೂಡಲೇ ಸ್ವತ: ಅದರ ಅನುಭವವನ್ನು ನೀಡಿ, ಆಕೆ ಕಂಡಿರುವ ಕನಸಿಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುವ ಮೂಲಕ ವಿದ್ಯಾರ್ಥಿನಿಯ ಭವಿಷ್ಯದ ಕನಸನ್ನು ನನಸು ಮಾಡುವ ಅಪರೂಪದ ಗಳಿಗೆಗೆ ಜಿಲ್ಲಾಧಿಕಾರಿ ಸಾಕ್ಷಿಯಾಗಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಕಾರ್ಯಾಗಾರ ಉದ್ಘಾಟನೆಗೆ ಆಗಮಿಸಿದ್ದ, ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್, ಬಾಡ ಗ್ರಾಮದ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಉತ್ಸುಕತೆಯಿಂದ ಅವರ ಕಚೇರಿಯ ಕೊಠಡಿಗೆ ತೆರಳಿದರು.