
ರಾಮನಗರ: ಬಹು ನಿರೀಕ್ಷಿತ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಜಿಲ್ಲೆಯು ಶೇ 63.12 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯಮಟ್ಟದಲ್ಲಿ 24ನೇ ಸ್ಥಾನ ಪಡೆದಿದೆ. ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ, ಜಿಲ್ಲೆಯು ರಾಜ್ಯಮಟ್ಟದಲ್ಲಿ 2 ಸ್ಥಾನ ಜಿಗಿತ ಕಂಡಿದೆ.

j3tvkannada
ಕಳೆದ ಸಲದ ಶೇ 71.16 ಫಲಿತಾಂಶಕ್ಕೆ ಹೋಲಿಸಿದರೆ ಈ ಸಲದ ಶೇಕಡವಾರು ಫಲಿತಾಂಶದಲ್ಲಿ ಶೇ 8.04 ಕುಸಿತ ಕಂಡಿದೆ. ಆದರೆ, ಈ ಬಾರಿ ರಾಜ್ಯಮಟ್ಟದ ಫಲಿತಾಂಶವೇ ಶೇ 66.14 ಇದೆ. ಹಾಗಾಗಿ, ಶೇಕಡವಾರು ಅಂಕ ಗಳಿಕೆಯಲ್ಲಿ ಕಡಿಮೆ ಇದ್ದರೂ ರಾಜ್ಯಮಟ್ಟದಲ್ಲಿ ಜಿಲ್ಲೆ ಪಡೆದಿರುವ ಸ್ಥಾನವು ಕಳೆದ ಸಲಕ್ಕಿಂತ ಈ ಸಲ ಎರಡು ಸ್ಥಾನ ಸುಧಾರಿಸಿದೆ.
ಯಶಿಕಾ, ಯುವನಶ್ರೀ ಪ್ರಥಮ: ಮಾಗಡಿ ಪಟ್ಟಣದ ವಾಸವಿ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ಯಶಿಕಾ ಟಿ.ಎಚ್ 625ಕ್ಕೆ 623 (ಶೇ 99.68) ಹಾಗೂ ಇದೇ ಮಾಗಡಿ ತಾಲ್ಲೂಕಿನ ಕುದೂರಿನ ಗುರುಕುಲ ವಿದ್ಯಾಮಂದಿರದ ಯುವನಶ್ರೀ ಸಹ 623 ಅಂಕ ಗಳಿಸುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎರಡನೇ ಮತ್ತು ಮೂರನೇ ಸ್ಥಾನವೂ ವಾಸವಿ ಶಾಲೆ ಪಾಲಾಗಿದೆ. ಇಲ್ಲಿನ ವಿದ್ಯಾರ್ಥಿಗಳಾದ ಆದಿತ್ಯ ಶಮಿತ್ ಜಿ.ಎಸ್ 622 (ಶೇ 99.52) ಅಂಕಗಳೊಂದಿಗೆ ಜಿಲ್ಲೆಗೆ ದ್ವಿತೀಯ ಹಾಗೂ 621 (ಶೇ 99.36) ಅಂಕ ಗಳಿಸಿರುವ ರಚನಾ ಡಿ.ಜಿ ತೃತೀಯ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿಯೂ ವಾಸವಿ ಶಾಲೆಯ ವಿದ್ಯಾರ್ಥಿಯೇ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಎಂಬುದು ಗಮನಾರ್ಹ.

j3tvkannada
ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿರುವ ಅಗ್ರ ಹತ್ತು ವಿದ್ಯಾರ್ಥಿಗಳ ಪಟ್ಟಿಯಲ್ಲಿ ಮಾಗಡಿ ತಾಲ್ಲೂಕಿನ ಐವರಿದ್ದಾರೆ. ಅದರಲ್ಲಿ ವಾಸವಿ ಶಾಲೆಯ ಮೂವರು ಮತ್ತು ಕುದೂರಿನ ಗುರುಕುಲ ವಿದ್ಯಾಮಂದಿರದ ಇಬ್ಬರಿದ್ದಾರೆ. ಉಳಿದಂತೆ ಚನ್ನಪಟ್ಟಣದಲ್ಲಿ ಇಬ್ಬರಿದ್ದಾರೆ. ಹಾರೋಹಳ್ಳಿ, ಕನಕಪುರ ಹಾಗೂ ರಾಮನಗರದ ತಲಾ ಒಬ್ಬೊಬ್ಬ ವಿದ್ಯಾರ್ಥಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಾಲಕಿಯರೇ ಮೇಲುಗೈ: ಜಿಲ್ಲೆಯಲ್ಲಿ ಪರೀಕ್ಷೆ ಎದುರಿಸಿದ್ದ 12,090 ವಿದ್ಯಾರ್ಥಿಗಳ ಪೈಕಿ 7,631 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಪರೀಕ್ಷೆ ಎದುರಿಸಿದ್ದ 5,805 ಬಾಲಕರಲ್ಲಿ 3,122 ಮಂದಿ ಪಾಸಾಗುವುದರೊಂದಿಗೆ ಶೇ 53.79 ಫಲಿತಾಂಶ ದಾಖಲಿಸಿದ್ದಾರೆ. ಅದೇ ರೀತಿ ಪರೀಕ್ಷೆ ಎದುರಿಸಿದ್ದ 6,285 ಬಾಲಕಿಯರ ಪೈಕಿ 4,509 ಮಂದಿ ಉತ್ತೀರ್ಣರಾಗುವುದರೊಂದಿಗೆ ಶೇ 71.77 ಫಲಿತಾಂಶ ಪಡೆದಿದ್ದಾರೆ.
ಲಿಂಗವಾರು ಫಲಿತಾಂಶ ಅವಲೋಕಿಸಿದಾಗ, ಈ ಸಲವು ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಇಲ್ಲೂ ಮಾಗಡಿ ತಾಲ್ಲೂಕು ಮೊದಲ (ಬಾಲಕರು ಶೇ 61.36; ಬಾಲಕಿಯರು ಶೇ 79.08) ಸ್ಥಾನದಲ್ಲಿದೆ. ರಾಮನಗರ ದ್ವಿತೀಯ ಸ್ಥಾನ (ಬಾಲಕರು ಶೇ 58.67; ಬಾಲಕಿಯರು ಶೇ 71.42) ಪಡೆದಿದೆ. ಚನ್ನಪಟ್ಟಣ ತಾಲ್ಲೂಕು ಮೂರನೇ ಸ್ಥಾನದಲ್ಲಿ (ಬಾಲಕರು ಶೇ 49.84; ಬಾಲಕಿಯರು ಶೇ 71.10) ಹಾಗೂ ಕನಕಪುರ ಕೊನೆಯ ಸ್ಥಾನದಲ್ಲಿದೆ.

j3tvkannada
ಇಂಗ್ಲಿಷ್ನವರೇ ಹೆಚ್ಚು ಪಾಸ್: ಈ ಸಲವೂ ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳೇ ಹೆಚ್ಚು ಪಾಸಾಗಿದ್ದಾರೆ. ಇಂಗ್ಲಿಷ್ನಲ್ಲಿ ಪರೀಕ್ಷೆ ಬರೆದಿದ್ದ ಒಟ್ಟು 6,040 ವಿದ್ಯಾರ್ಥಿಗಳ ಪೈಕಿ 4,324 (ಶೇ 71.58) ವಿದ್ಯಾರ್ಥಿಗಳು, ಕನ್ನಡದಲ್ಲಿ ಬರೆದಿದ್ದ 5,960 ಮಂದಿ ಪೈಕಿ 3,259 (ಶೇ 54.60) ಹಾಗೂ ಉರ್ದುವಿನಲ್ಲಿ ಪರೀಕ್ಷೆ ಬರೆದಿದ್ದ 90 ವಿದ್ಯಾರ್ಥಿಗಳ ಪೈಕಿ 48 (ಶೇ 53.33) ಮಂದಿ ಉತ್ತೀರ್ಣರಾಗಿದ್ದಾರೆ.
2 ಸರ್ಕಾರಿ ಶಾಲೆಗೆ ಶೇ 100 ಫಲಿತಾಂಶ:-
ಜಿಲ್ಲೆಯ ಐದು ಪ್ರೌಢಶಾಲೆಗಳು ಈ ಸಲ ಶೇ 100ರಷ್ಟು ಫಲಿತಾಂಶ ದಾಖಲಿಸಿವೆ. ಇದರಲ್ಲಿ ಸರ್ಕಾರಿ ಶಾಲೆಯೂ ಒಂದು. ಚನ್ನಪಟ್ಟಣ ಟೌನ್ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ವಸತಿ ಶಾಲೆ ಮತ್ತು ಇದೇ ತಾಲ್ಲೂಕಿನ ಹೊನ್ನಾಯಕನಹಳ್ಳಿಯ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ಶೇ 100 ಫಲಿತಾಂಶ ಪಡೆದಿರುವ ಸರ್ಕಾರಿ ಶಾಲೆಗಳು. ಉಳಿದಂತೆ ಮಾಗಡಿ ತಾಲ್ಲೂಕಿನ ದೋಣಕುಪ್ಪೆಯ ಅನುದಾನ ರಹಿತ ಸಿ.ಎನ್ಎ.ಸ್ ಪ್ರೌಢಶಾಲೆ ಮಾಗಡಿ ಟೌನ್ ವೆಂಕಟ್ ಇಂಟರ್ನ್ಯಾಷನಲ್ ಪ್ರೌಢಶಾಲೆ ಹಾಗೂ ಕನಕಪುರ ತಾಲ್ಲೂಕಿನ ಸುವರ್ಣಮುಖಿ ಪ್ರೌಢಶಾಲೆ ಶೇಕಡ ನೂರರಷ್ಟು ಫಲಿತಾಂಶ ಪಡೆದಿವೆ.