
ರಾಮನಗರ: ಡಿ ಕೆ ಸುರೇಶ್ ಪತ್ನಿ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಶಿಕ್ಷಕಿ ಪವಿತ್ರಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ವಕೀಲ ಪ್ರದೀಪ್ ನೀಡಿದ ದೂರಿನ ಆಧಾರದ ಮೇಲೆ ರಾಮನಗರ ಸಿ.ಇ.ಎನ್ ಪೊಲೀಸರು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪವಿತ್ರಾ ಅವರು ಡಿ ಕೆ ಸುರೇಶ್ ಅವರ ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

j3tvkannada
ಮೈಸೂರಿನ ಇಲವಾಲದಲ್ಲಿ ಸರಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪವಿತ್ರಾರನ್ನು ವಕೀಲ ಪ್ರದೀಪ್ ಎಂಬುವವರು ನೀಡಿದ್ದ ದೂರಿನನ್ವಯ ರಾಮನಗರ ಸಿಇಎನ್ ಪೊಲೀಸರು ವಶಕ್ಕೆ ಪಡೆದು ಕೋರ್ಟ್ ಮುಂದೆ ಹಾಜರು ಪಡಿಸಿದ್ದರು.ತಾನು ಮಾಜಿ ಸಂಸದ ಡಿ ಕೆ ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು, ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಶಿಕ್ಷಕಿ ಪವಿತ್ರಾ ಏ. 8ರಂದು ವಿಡಿಯೋ ಹರಿಬಿಟ್ಟಿದ್ದರು. ಇನ್ಸ್ಟಾಗ್ರಾಮ್ನಲ್ಲಿ ಪವಿತ್ರ 256 ಎಂಬ ಹೆಸರಿನಲ್ಲಿ ಹಾಗೂ ಫೇಸ್ಬುಕ್ನಲ್ಲಿ ಪವಿತ್ರ ಡಿಕೆ ಸುರೇಶ್ ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಪವಿತ್ರಾ, ಸುರೇಶ್ ಅವರ ಚಿತ್ರದೊಂದಿಗೆ ತನ್ನ ಚಿತ್ರವನ್ನು ಎಡಿಟ್ ಮಾಡಿ ಜೋಡಿಸಿ ವಿಡಿಯೋ ಮಾಡಿದ್ದರು. ವಿಡಿಯೋದಲ್ಲಿ ಪವಿತ್ರಾ ಡಿ ಕೆ ಸುರೇಶ್ ಎಂದಿರುವ ನಕಲಿ ಮತದಾರರ ಗುರುತಿನ ಚೀಟಿಯನ್ನು ಸಹ ಪೋಸ್ಟ್ ಮಾಡಿದ್ದರು.
ವಿಡಿಯೋದಲ್ಲಿ ಏನಿದೆ:-
ಡಿ.ಕೆ. ಸುರೇಶ್ ಅವರ ಹೆಂಡತಿಯಾಗಿ ಹೇಳಬೇಕೆಂದರೆ, ನಾನು ಫಸ್ಟ್ ಸುರೇಶ್ ಅವರ ಅಭಿಮಾನಿ. ಯಾಕೆಂದರೆ ಅವರು ಮೂರು ಸಲ ಸಂಸದರಾಗಿ ಯಾರೂ ಮಾಡಲಿಕ್ಕಾಗದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂತಹವರನ್ನು ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿಪಡುತ್ತೇನೆ, ಎಂದು ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ.
ಪವಿತ್ರಾ ಈ ರೀತಿ ಹೇಳಿದ್ಯಾಕೆ:-
ಮೈಸೂರಿನ ಇಲವಾಲದಲ್ಲಿ ಸರಕಾರಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಪವಿತ್ರಾ, ಪತಿಯಿಂದ ವಿಚ್ಛೇದನ ಪಡೆದಿದ್ದು, ಅಕ್ಕಪಕ್ಕದ ಮನೆಯವರಿಂದ ಪವಿತ್ರಾ ಅವರಿಗೆ ಕಿರಿಕಿರಿ ಹೆಚ್ಚಾಗಿತ್ತು ಎನ್ನಲಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಾಗೂ ಡಿಕೆ ಸುರೇಶ್ ಪತ್ನಿ ಎಂದರೆ ಜನ ಹೆದರುತ್ತಾರೆ ಎಂಬ ಕಾರಣಕ್ಕಾಗಿ ಈ ರೀತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದುರುದ್ದೇಶದಿಂದ ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ಅಪಪ್ರಚಾರ ನಡೆಸುತ್ತಿರುವ ಮಹಿಳೆ, ಸಾರ್ವಜನಿಕವಾಗಿ ತಪ್ಪು ಸಂದೇಶ ಹರಡುತ್ತಿದ್ದಾರೆ. ಸುರೇಶ್ ಅವರ ಸಂಬಂಧಿಕರು ಹಾಗೂ ರಾಜಕಾರಣಿಗಳಿಗೆ ಹತ್ತಿರದವಳು ಎಂದು ಹೇಳಿಕೊಂಡು ನಟಿಸುತ್ತಿದ್ದಾರೆ. ಕಾಂಗ್ರೆಸ್ ಚಿಹ್ನೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾಳೆ. ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ವಕೀಲ ಪ್ರದೀಪ್ ತಿಳಿಸಿದ್ದಾರೆ.