
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 60 ವಾರ್ಡ್ಗಳಲ್ಲಿ ಏಕಕಾಲದಲ್ಲಿ ಬೀದಿ ನಾಯಿಗಳ ಗಣತಿಯ ವರದಿಯನ್ನು ವರ್ಲ್ಡ್ ವೈಡ್ ವೆಟರಿನರಿ ಸರ್ವಿಸಸ್ (ಡಬ್ಲ್ಯುವಿಎಸ್) ಸಂಸ್ಥೆಯು ಪಾಲಿಕೆಗೆ ಸಲ್ಲಿಸಿದೆ. ಅದರ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ 53,384 ಬೀದಿ ನಾಯಿಗಳು ಪತ್ತೆಯಾಗಿವೆ. ಮಹಾನಗರ ಪಾಲಿಕೆ, ಡಬ್ಲ್ಯುವಿಎಸ್ ಹಾಗೂ ಅನಿಮಲ್ ಕೇರ್ ಟ್ರಸ್ಟ್, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಗಳು ಸೇರಿ ಬೀದಿನಾಯಿಗಳ ಸಹಕಾರದಲ್ಲಿ ಗಣತಿ ನಡೆದಿತ್ತು. ಈ ಗಣತಿ ಸಲುವಾಗಿ ಡಬ್ಲ್ಯುವಿಎಸ್ ಅಭಿವೃದ್ಧಿಪಡಿಸಿದ್ದ ‘ಆ್ಯಪ್’ ಬಳಸಿ 2025ರ ಫೆ. 10ರಿಂದ ನಗರದ ಪ್ರತಿ ವಾರ್ಡ್ನಲ್ಲಿ ಐದು ದಿನ ಬೀದಿ ನಾಯಿಗಳ ದಾಖಲೀಕರಣ ನಡೆಸಲಾಗಿತ್ತು. 60 ವಾರ್ಡ್ಗಳನ್ನು ಮೊದಲೇ ಮ್ಯಾಪಿಂಗ್ ಮಾಡಿ, ಅದರ ಪ್ರಕಾರ ಗುರುತಿಸಲಾದ ರಸ್ತೆಗಳಲ್ಲಿ, ಓಣಿಗಳಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗಿದ್ದ ಸ್ವಯಂಸೇವಕರು ಪತ್ತೆಯಾದ ಬೀದಿ ನಾಯಿಗಳ ಮಾಹಿತಿಯನ್ನು ಜಿಪಿಎಸ್ ದತ್ತಾಂಶಗಳ ಸಮೇತ ಆ್ಯಪ್ನಲ್ಲಿ ದಾಖಲಿಸಿದ್ದರು.

J3tvkannada
ನಿರ್ದಿಷ್ಟ ಪ್ರದೇಶದಲ್ಲಿ ಎಷ್ಟು ಬೀದಿ ನಾಯಿಗಳು ಪತ್ತೆಯಾದವು, ಅವುಗಳಲ್ಲಿ ಎಷ್ಟಕ್ಕೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಆಗಿದೆ, ಎಷ್ಟಕ್ಕೆ ಶಸ್ತ್ರಚಿಕಿತ್ಸೆ ಆಗಿಲ್ಲ, ಮರಿಗಳಿಗೆ ಹಾಲುಣಿಸುವ ಹೆಣ್ಣುನಾಯಿಗಳೆಷ್ಟು, ಅವುಗಳ ಮರಿಗಳೆಷ್ಟು ಎಂಬೆಲ್ಲಾ ಮಾಹಿತಿಗಳನ್ನು ಸ್ವಯಂ ಸೇವಕರು ಆ್ಯಪ್ನಲ್ಲಿ ದಾಖಲಿಸಿದ್ದರು. ಮೊದಲ ದಿನ ಬೀದಿ ನಾಯಿ ಪತ್ತೆಯಾದ ಕಡೆಗೆ ಮರು ದಿನ ಮತ್ತೆ ಭೇಟಿ ನೀಡಿ ಅವುಗಳು ಆ ಪ್ರದೇಶದಲ್ಲೇ ಇವೆಯೇ, ಅಥವಾ ಬೇರೆ ಕಾಣಸಿಕೊಂಡಿವೆಯೇ ಎಂಬ ಅಂಶಗಳನ್ನೂ ಆ್ಯಪ್ನಲ್ಲಿ ದಾಖಲಿಸಿಕೊಂಡಿದ್ದರು.
60 ವಾರ್ಡ್ಗಳಲ್ಲಿ ಗಣತಿ ವೇಳೆ ಪತ್ತೆಯಾದ ಬೀದಿನಾಯಿಗಳ ಸರಾಸರಿ ಪ್ರಮಾಣ ಜಾಸ್ತಿ ದಾಖಲಾಗಿರುವುದು ಬೈಕಂಪಾಡಿ ವಾರ್ಡ್ನಲ್ಲಿ (ವಾರ್ಡ್ ಸಂಖ್ಯೆ 10) ಜಾಸ್ತಿ. ಬೀದಿನಾಯಿಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ದಾಖಲಾಗಿರುವುದು ಬಜಾಲ್ (ವಾರ್ಡ್ 53) ವಾರ್ಡ್ನಲ್ಲಿ. ನಗರದಲ್ಲಿ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಅವುಗಳ ಬಗ್ಗೆ ನಿಖರವಾದ ಅಂಕಿ ಅಂಶಗಳನ್ನು ಹೊಂದಿರುವುದು ಅತ್ಯಂತ ಮುಖ್ಯ.

j3tvkannada
ಗಣತಿ ಬಳಿಕ ಅತ್ಯಂತ ವೈಜ್ಞಾನಿಕವಾಗಿ ಕಲೆ ಹಾಕಿರುವ ಅಂಕಿ ಅಂಶಗಳು ಪಾಲಿಕೆಗೆ ಲಭ್ಯವಾಗಿವೆ. ಹಾಗಾಗಿ ಅವುಗಳ ಸಂತಾನ ನಿಯಂತ್ರಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಸಾಧ್ಯವಾಗಲಿದೆ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು. ಗಣತಿಯ ವರದಿ ಪ್ರಕಾರ ನಗರದಲ್ಲಿ ಕಂಡು ಬಂದ ಹೆಚ್ಚಿನ ಬೀದಿ ನಾಯಿಗಳು ಆರೋಗ್ಯಕರವಾಗಿದ್ದವು. ಕೆಲವು ನಾಯಿಗಳು ಚರ್ಮ ರೋಗ ಅಥವಾ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವುದು ಕಂಡು ಬಂದಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಬೀದಿನಾಯಿಗಳ ಪ್ರಮಾಣ ಶೇ 46ರಷ್ಟು ಮಾತ್ರ ಎಂದು ಗಣತಿಯಲ್ಲಿ ಕಂಡು ಬಂದಿದೆ. ದೇರೆಬೈಲ್ ದಕ್ಷಿಣ (ವಾರ್ಡ್ 24) ಮಣ್ಣಗುಡ್ಡ (ವಾರ್ಡ್ 28) ಕಂಬಳ (ವಾರ್ಡ್ 29) ಮತ್ತು ಕಂಟೋನ್ಮಂಟ್ (ವಾರ್ಡ್ 46) ವಾರ್ಡ್ಗಳಲ್ಲಿ ಶೇ 70ಕ್ಕೂ ಹೆಚ್ಚು ಬೀದಿನಾಯಿಗಳು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿವೆ. ಈ ಶಸ್ತ್ರಚಿಕಿತ್ಸೆಗೆ ಒಳಗಾದ ಬೀದಿನಾಯಿಗಳ ಪ್ರಮಾಣ ಕುಂಜತ್ಬೈಲ್ (ವಾರ್ಡ್ 13) ಬಜಾಲ್ (ವಾರ್ಡ್ 53) ಜಪ್ಪಿನಮೊಗರು (ವಾರ್ಡ್ 54) ಅತ್ತಾವರ (ವಾರ್ಡ್ 55) ಮತ್ತು ಜೆಪ್ಪು (ವಾರ್ಡ್ 59) ವಾರ್ಡ್ಗಳಲ್ಲಿ ಅತ್ಯಂತ ಕಡಿಮೆ ಇದೆ.
ಈ ವಾರ್ಡ್ಗಳಲ್ಲಿ ಕಂಡು ಬಂದ ಬೀದಿನಾಯಿಗಳಲ್ಲಿ ಈ ಶಸ್ತ್ರಚಿಕಿತ್ಸೆಗೆ ಒಳಗಾದವುಗಳ ಪ್ರಮಾಣ ಶೇ 20ಕ್ಕಿಂತಲೂ ಕಡಿಮೆ ಇವೆ. ಯಾವ ಪ್ರದೇಶದಲ್ಲಿ ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗದ ನಾಯಿಗಳ ಪ್ರಮಾಣ ಜಾಸ್ತಿ ಇದೆ ಎಂಬುದು ನಿಖರವಾಗಿ ಗೊತ್ತಾಗಿದೆ. ಇಂತಹ ಕಡೆಗಳಲ್ಲಿ ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕೆ ಒತ್ತು ನೀಡಲಿದ್ದೇವೆ ಎಂದು ಬೀದಿನಾಯಿ ಸಂತಾನ ನಿಯಂತ್ರಣದ ಹೊಣೆ ಹೊತ್ತ ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ನ ಟ್ರಸ್ಟಿ ಸುಮಾ ಆರ್.ನಾಯಕ್ ತಿಳಿಸಿದರು.