
ಶಿವಮೊಗ್ಗ : ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ, ಈ ಹಿನ್ನೆಲೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದಲ್ಲಿ, ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಕೋಳಿ ಮಾಂಸ ಸೇವಿಸಿದರೆ ಹಕ್ಕಿ ಜ್ವರ ಬರಲಿದೆಯೇ ಎಂಬ ಗೊಂದಲಕ್ಕೆ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕೋಳಿ ಮಾಂಸ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ಹಕ್ಕಿ ಜ್ವರ ಬರುವುದಿಲ್ಲ. ಆದರೆ ಸೋಂಕು ತಗುಲಿದ ಕೋಳಿಯ ಮಾಂಸ ಚೆನ್ನಾಗಿ ಬೇಯಿಸದೆ ಹಾಗೂ ಅವುಗಳ ಹಸಿ ಮೊಟ್ಟೆ ಸೇವನೆಯಿಂದ ರೋಗ ತಗಲುವ ಸಾಧ್ಯತೆಗಳಿರುತ್ತವೆ ಎಂದು ಎಚ್ಚರಿಸಿದರು.
ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರ ಸೇವಿಸಬೇಕು. ಅಡುಗೆಗಾಗಿ ಕೋಳಿ ಮಾಂಸ ಸಿದ್ದಪಡಿಸಿದ ನಂತರ ಕೈಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು, ಎಂದು ತಿಳಿಸಿದರು.