
ಕೋಲಾರ: ನಿತ್ಯ ನಾಲ್ಕು ಗೋಡೆಗಳ ಮಧ್ಯೆ ಪಾಠ, ನಂತರ ಹೋಂವರ್ಕ್, ಟ್ಯೂಷನ್ ಒತ್ತಡದಲ್ಲಿಯೇ ಕಳೆದುಹೋಗುತ್ತಿದ್ದ ಮಕ್ಕಳು ಈಗ ಬೇಸಿಗೆ ಕ್ರೀಡಾ ಶಿಬಿರಗಳಲ್ಲಿ ಲೀನವಾಗಿದ್ದಾರೆ. ಬೇಸಿಗೆ ರಜೆ ಕಾರಣ ನಗರದ ವಿವಿಧ ಸಂಘ ಸಂಸ್ಥೆಗಳು, ಕ್ರೀಡಾ ಸಂಸ್ಥೆಗಳು, ಕ್ರೀಡಾ ಇಲಾಖೆ 15 ದಿನಗಳಿಂದ ಉಚಿತ ಶಿಬಿರ ಆಯೋಜನೆ ಮೂಲಕ ಮಕ್ಕಳ ಸಂತೋಷ ಮತ್ತಷ್ಟು ಹೆಚ್ಚಿಸಿವೆ. ಕೆಲವರು ಮಕ್ಕಳಿಗೆ ಸಂಗೀತ, ಹಾಡುಗಾರಿಕೆ, ನೃತ್ಯ, ಚಿತ್ರಕಲೆ, ಯೋಗ ತರಬೇತಿಯಂತಹ ಕ್ರಿಯಾತ್ಮಕ ಚಟುವಟಿಕೆ ಹಮ್ಮಿಕೊಂಡಿದ್ದರೆ, ಇನ್ನು ಕೆಲವರು ಬ್ಯಾಸ್ಕೆಟ್ಬಾಲ್, ಕ್ರಿಕೆಟ್, ಈಜು, ಫುಟ್ಬಾಲ್, ಅಥ್ಲೆಟಿಕ್ಸ್, ಜುಡೋ, ಕರಾಟೆ ಚಟುವಟಿಕೆಗಳನ್ನು ಆಯೋಜಿಸಿದ್ದಾರೆ.

j3tvkannada
ಶಿಬಿರಗಳ ಆಯೋಜಕರು ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಬ್ಯಾಚ್ ಮಾಡಿಕೊಂಡು ಆ ಮೂಲಕ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆಯಿಂದ ಮಕ್ಕಳಿಗೆ ಅಥ್ಲೆಟಿಕ್ಸ್ ಹಾಗೂ ಜುಡೊ ಬೇಸಿಗೆ ಶಿಬಿರ ನಡೆದಿದೆ. ಮೊದಲ ಹಂತದ ಶಿಬಿರವು ಮೇ 1 ರವರೆಗೆ ಹಾಗೂ ಎರಡನೇ ಹಂತದ ಶಿಬಿರವು ಮೇ 2 ರಿಂದ 26 ರವರೆಗೆ ನಡೆಯಲಿದೆ. ಕ್ರೀಡಾ ಇಲಾಖೆಯು ಉಚಿತವಾಗಿ ಅಥ್ಲೆಟಿಕ್ಸ್ ಹಾಗೂ ಜುಡೊ ಬೇಸಿಗೆ ಶಿಬಿರವನ್ನು ಆರಂಭಿಸಿದೆ. ಎರಡು ಹಂತಗಳ ಈ ಶಿಬಿರದಲ್ಲಿ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಬೇಕು’ ಎನ್ನುತ್ತಾರೆ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ. ಕನಕ ಬ್ಯಾಸ್ಕೆಟ್ಬಾಲ್ ಕ್ಲಬ್ನಿಂದ ಮಾಜಿ ಆಟಗಾರ ಅಂಚೆ ಅಶ್ವತ್ ನೇತೃತ್ವದಲ್ಲಿ ನಗರದಲ್ಲಿ ಮೇ 25ರವರೆಗೆ ಬೇಸಿಗೆ ತರಬೇತಿ ಶಿಬಿರ ನಡೆಯುತ್ತಿದ್ದು, 100 ಮಕ್ಕಳು ಪಾಲ್ಗೊಂಡಿದ್ದಾರೆ. ಸಂತೋಷ್ ಸಿಂಗ್, ರಘುವೀರ್, ವಿನಾಯಕ ಹಾಗೂ ಸಂತೋಷ್ ಮಾರ್ಗದರ್ಶನ ನೀಡುತ್ತಿದ್ದಾರೆ.

j3tvkannada
ಸೌಮ್ಯಾ (ವಿಶ್ವವಿದ್ಯಾಲಯ ಆಟಗಾರ್ತಿ), ಮಹಾಲಕ್ಷ್ಮಿ (ಆಟಗಾರ್ತಿ), ಜಯಶ್ರೀ (16 ವರ್ಷದೊಳಗಿನವರ ಆಟಗಾರ್ತಿ) ಕೂಡ ಮಕ್ಕಳಿಗೆ ಆಟ ಹೇಳಿಕೊಡುತ್ತಿದ್ದಾರೆ. ನಿತ್ಯ ಮಕ್ಕಳಿಗೆ ಕಾಳು ಹಾಗೂ ಹಾಲು ನೀಡಲಾಗುತ್ತಿದೆ. ಬೆಳಿಗ್ಗೆ 5.30ರಿಂದ 9 ಗಂಟೆ, ಸಂಜೆ 5.30ರಿಂದ 9 ಗಂಟೆವರೆಗೆ ಶಿಬಿರ ನಡೆಯುತ್ತಿದೆ. ಜೊತೆಗೆ ಟೂರ್ನಿಗಳಿಗೂ ಕರೆದುಕೊಂಡು ಹೋಗುತ್ತಿದ್ದಾರೆ. ಬಂಗಾರಪೇಟೆಯಲ್ಲಿ ಕೋಚ್ ಎಂ.ಮಂಜುನಾಥ್ ಅವರು ಮಕ್ಕಳಿಗೆ ಬೇಸಿಗೆ ಈಜು ಕಲಿಕೆ ಶಿಬಿರ ಹಮ್ಮಿಕೊಂಡಿದ್ದಾರೆ. ಕೋಲಾರ ನಗರದ ಪಿ.ಸಿ.ಬಡಾವಣೆಯಲ್ಲಿ ರತ್ನಮಾತ ಮಹಿಳಾ ಮಂಡಳಿಯಿಂದ ಬೇಸಿಗೆ ಶೀಬಿರ ಹಮ್ಮಿಕೊಳ್ಳಲಾಗಿದೆ.
ಕೋಲಾರ ಕ್ರೀಡಾ ಸಂಘದಿಂದ 10 ರಿಂದ 16 ವರ್ಷದ ಮಕ್ಕಳಿಗೆ ಟೇಕಲ್ ರಸ್ತೆಯ ಅಂಬೇಡ್ಕರ್ ಮಕ್ಕಳ ಉದ್ಯಾನದಲ್ಲಿರುವ ಕ್ರೀಡಾಂಗಣದಲ್ಲಿ ಉಚಿತ ಬೇಸಿಗೆ ತರಬೇತಿ ಶಿಬಿರವನ್ನು ಮೇ 6ರವರೆಗೆ ಹಮ್ಮಿಕೊಳ್ಳಲಾಗಿದೆ.
ತರಬೇತಿಯ ಸಮಯದಲ್ಲಿ ಮಕ್ಕಳಿಗೆ ಪ್ರತಿದಿನ ಹಾಲು, ಮೊಟ್ಟೆ, ಬಾಳೆಹಣ್ಣು, ಬಿಸ್ಕತ್ತು, ಮೊಳಕೆಕಾಳು ಹಾಗೂ ಡ್ರೈಪೂಟ್ಸ್ ನೀಡಲಾಗುತ್ತಿದೆ. ಕೋಲಾರ ಕೊಕ್ಕೊ ಸಂಸ್ಥೆಯಿಂದ ಬಾಲಕ, ಬಾಲಕಿಯರಿಗೆ ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಉಚಿತ ಬೇಸಿಗೆ ಕೊಕ್ಕೊ ತರಬೇತಿ ಶಿಬಿರವನ್ನು ಮೇ 10ರವರೆಗೆ ಆಯೋಜಿಸಲಾಗಿದೆ. ಎರಡು ತಿಂಗಳ ಬೇಸಿಗೆ ಶಿಬಿರದಲ್ಲಿ ಮಕ್ಕಳಲ್ಲಿ ಯಾವ ವಿಷಯದ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆಯೋ ಅದು ಭವಿಷ್ಯದಲ್ಲಿ ದೊಡ್ಡ ಸಾಧನೆಗೆ ಕಾರಣವಾಗಬಹುದು. ಬೆಳೆಯುವ ಪೈರು ಮೊಳಕೆಯಲ್ಲಿ ಕಾಣು ಎನ್ನುವಂತೆ ಮಕ್ಕಳ ಮುಂದಿನ ಸಾಧನೆಗೆ ಈಗಿನ ಸಣ್ಣ ಬೇಸಿಗೆ ಶಿಬಿರಗಳು ವೇದಿಕೆಯಾಗಬಹುದು ಎನ್ನುತ್ತಾರೆ ಕ್ರೀಡಾ ತರಬೇತಿದಾರರು.