
ರಾಮನಗರ: ಭೂಗತ ಲೋಕದ ಮಾಜಿ ಡಾನ್ ಹಾಗೂ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಕಾರಿನ ಮೇಲೆ ತಾಲ್ಲೂಕಿನ ಬಿಡದಿ ಬಳಿಯ ನಿವಾಸದ ಬಳಿ ರಾತ್ರಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ರಿಕ್ಕಿ ಅವರ ಕೈ ಮತ್ತು ಮೂಗಿಗೆ ಗುಂಡೇಟು ತಗುಲಿ ಗಂಭೀರವಾದ ಗಾಯಗಳಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

j3tvkannada
ಬಿಡದಿ ಬಳಿ ಇರುವ ತಮ್ಮ ಮನೆಯಿಂದ ರಾತ್ರಿ 1.30ರ ಸುಮಾರಿಗೆ ರಿಕ್ಕಿ ಅವರು ಗನ್ಮ್ಯಾನ್ ಮತ್ತು ಚಾಲಕನೊಂದಿಗೆ ಬೆಂಗಳೂರಿಗೆ ಹೊರಟ್ಟಿದ್ದರು. ಮನೆ ಕಾಂಪೌಂಡ್ ದಾಟಿ ಹೊರಬಂದ ಕಾರಿನ ಮೇಲೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು.
ಘಟನೆಯಲ್ಲಿ ರಿಕ್ಕಿ ಜೊತೆಗಿದ್ದ ಕಾರು ಚಾಲಕ ಮತ್ತು ಗನ್ಮ್ಯಾನ್ಗೂ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರಿಗೂ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ ಘಟನೆ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಶ್ವಾನದಳ, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ರಿಕ್ಕಿ ಅವರ ಮನೆಯಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಅಡುಗೆ ಸಿಬ್ಬಂದಿಯನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ. ಸ್ಥಳದಲ್ಲಿ ಮೊಬೈಲ್ ಮತ್ತು ಗುಂಡುಗಳು ಪತ್ತೆಯಾಗಿವೆ ಪೊಲೀಸ್ ಮೂಲಗಳು ತಿಳಿಸಿವೆ.
ಎರಡು ದಿನಗಳ ಹಿಂದೆಯಷ್ಟೇ ರಷ್ಯಾದಿಂದ ಹಿಂದಿರುಗಿದ್ದ ರಿಕ್ಕಿ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ತಂದೆ ಮುತ್ತಪ್ಪ ರೈ ಆಸ್ತಿ ವಿಚಾರಕ್ಕೆ ಕೆಲವರ ಜೊತೆ ಮನಸ್ತಾಪ ಇತ್ತು. ಮುತ್ತಪ್ಪ ರೈ ನಿಧನದ ಬಳಿಕ ರಿಕ್ಕಿ ಕೆಲವರ ಜೊತೆ ಗಲಾಟೆ ಮಾಡಿಕೊಂಡಿದ್ದರು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಾರ್ಪ್ ಶೂಟರ್ ಮೂಲಕ ದಾಳಿ ನಡೆಸಿ ಹತ್ಯೆಗೆ ಪ್ರಯತ್ನಿಸಿರುವ ಅನುಮಾನವಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.