

j3tvkannada
ದಕ್ಷಿಣ ಕನ್ನಡ : ಮೂಲ್ಕಿ ಕೊಲ್ನಾಡು ನಿವಾಸಿ ಮೊಹಮ್ಮದ್ ಷರೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆಟೋಚಾಲಕರಾಗಿದ್ದ ಮಹಮ್ಮದ್ ಷರೀಫ್ ಅವರು ನಿತ್ಯವೂ ಮಂಗಳೂರಿನ ಕೊಟ್ಟಾರದ ಆಟೊ ನಿಲ್ದಾಣದಲ್ಲಿ ಬಾಡಿಗೆ ನಡೆಸುತ್ತಿದ್ದರು.
ಬುಧವಾರ ಮನೆಯಿಂದ ಹೊರಟಿದ್ದ ಅವರು ರಾತ್ರಿಯಾದರೂ ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಕುಟುಂಬದವರು ಮೂಲ್ಕಿ ಠಾಣೆಗೆ ದೂರು ನೀಡಿದ್ದರು. ಷರೀಫ್ ಅವರ ಮೃತದೇಹವು ಕುಂಜತ್ತೂರು ಅಡ್ಕ ಪಳ್ಳ ಎಂಬಲ್ಲಿನ ಖಾಸಗಿ ಹಿತ್ತಿಲ ಬಾವಿ ಯಲ್ಲಿ ಏ.10 ರಂದು ಪತ್ತೆಯಾಗಿತ್ತು. ಶವದ ಮೈಮೇಲೆ ಮಾರಕಾಯುಧದಿಂದ ಥಳಿಸಿದ ಗಾಯಗಳು ಪತ್ತೆಯಾಗಿದ್ದವು. ಬಾವಿಯ ಸಮೀಪದಲ್ಲೇ ಇವರ ಆಟೊರಿಕ್ಷಾ ಕೂಡ ಸಿಕ್ಕಿತ್ತು. ಪೊಲೀಸರು ವಶಪಡಿಸಿಕೊಂಡಿರುವ ಆರೋಪಿಯು ಸುರತ್ಕಲ್ ಸಮೀಪದ ಕಾಟಿಪಳ್ಳದವನು ಎಂದು ಗೊತ್ತಾಗಿದೆ.