

ವಿಜಯಪುರ : ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಲಾರಿಯೊಂದು (ಜಿಜೆ06-ಎಯು5073) ಎರ್ರಾಬಿರಿಯಾಗಿ ಚಲಿಸಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದ್ದು,ಬಿಎಸ್ಎಫ್ ಯೋಧ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ. ಮುದ್ದೇಬಿಹಾಳ ತಾಲ್ಲೂಕು ಕಾಳಗಿ ತಾಂಡಾದ ಬಿಎಸ್ಎಫ್ ಯೋಧ ಮೌನೇಶ ಖೂಬಪ್ಪ ರಾಠೋಡ (35) ಸಾವಿಗೀಡಾಗಿದ್ದಾರೆ. ಕಾಳಗಿ ತಾಂಡಾದಿಂದ ನಿಡಗುಂದಿ ಮೂಲಕ ಬಾಗಲಕೋಟೆ ಜಿಲ್ಲೆಯ ಆಲೂರ ತಾಂಡಾದಲ್ಲಿರುವ ಪತ್ನಿ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿ, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸಾವಿಗೀಡಾದ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ಲಭಿಸಿಲ್ಲ. ನಿಡಗುಂದಿ ಬಸ್ ನಿಲ್ದಾಣದ ಮುಂದೆ ಲಾರಿಯು ಬೈಕ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಗೋವಾಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ಗೂ ಲಾರಿ ಡಿಕ್ಕಿ ಹೊಡೆದಿದೆ. ಬಸ್ನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ.ಲಾರಿಯು ಬಳಿಕ ಉತ್ತರ ಪ್ರದೇಶದ ಮೂಲದ ಅಂಬುಲೆನ್ಸ್ ಗೆ ಡಿಕ್ಕಿ ಹೊಡೆದಿದ್ದು, ನಜ್ಜುಗುಜ್ಜಾಗಿದೆ. ಅಂಬ್ಯುಲೆನ್ಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯತೇ ಅಪಘಾತಕ್ಕೆ ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿದ್ದು, ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆ ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.