
ಮುಳಬಾಗಿಲು : ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ಸಣ್ಣ ಪುಟ್ಟ ಹಳ್ಳಗಳು ತುಂಬಿ ಹೊಳೆಯಂತೆ ಹರಿದವು. ಶುಕ್ರವಾರ ಸಂಜೆ ಸುಮಾರು ಮೂರು ಗಂಟೆಗೆ ಪ್ರಾರಂಭವಾದ ಮಳೆ ಎರಡು ಗಂಟೆಗಳ ಕಾಲ ಬಿಡುವಿಲ್ಲದೆ ಸುರಿದು ಎಲ್ಲೆಂದರಲ್ಲಿ ನೀರು ಹೊಳೆಯಂತೆ ಹರಿಯಿತು. ಕೃಷಿ ತೋಟಗಳಲ್ಲಿಯೂ ನೀರು ತುಂಬಿಕೊಂಡಿತ್ತು. ಮಧ್ಯಾಹ್ನದವರೆಗೂ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನ-ಜಾನುವಾರುಗಳು ಏಕಾಏಕಿ ಬಿದ್ದ ಮಳೆಯಿಂದ ತಂಪುಂಡು ಹಿಗ್ಗಿದರೂ ಕೃಷಿ ಚಟುವಟಿಕೆಗಳು ಇದರಿಂದ ಅಸ್ತವ್ಯಸ್ತಗೊಂಡವು. ದೈನಂದಿನ ಕೆಲಸ-ಕಾರ್ಯಗಳಿಗೆ, ತೋಟ-ಗದ್ದೆಗಳಿಗೆ ಹೋಗಿದ್ದ ಜನ ಮಳೆಯಿಂದಾಗಿ ಮರಗಳ ಕೆಳಗೆ, ಕಟ್ಟಡಗಳ ಬಳಿ ಅಲ್ಲಲ್ಲಿ ಆಸರೆ ಪಡೆದು, ಮಳೆ ನಿಂತ ಮೇಲೆ ಮನೆಗಳಿಗೆ ಮರಳಿದರು. ಸಂಜೆಯ ನಂತರವೂ ತಾಲ್ಲೂಕಿನಲ್ಲಿ ಮೋಡ ಮುಚ್ಚಿದ ವಾತಾವರಣ ಮುಂದುವರೆದು, ರಾತ್ರಿಯೂ ಮಳೆಯಾಗುವ ಮುನ್ಸೂಚನೆಯನ್ನು ಸಾರುತ್ತಿತ್ತು.
