

ಬೆಳಗಾವಿ : ಪಟ್ಟಣಕ್ಕೆ ಕೃಷ್ಣಾ ನದಿಯಿಂದ ನೀರು ಪೂರೈಸುವ ಕಲ್ಲೋಳ ಹಾಗೂ ಮಾಂಜರಿ ಚಾಕವೆಲ್ಗಳಲ್ಲಿ ಕಳೆದೊಂದು ತಿಂಗಳಿನಿಂದ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿದೆ. ಹೀಗಾಗಿ 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ದೀಪದ ಬುಡದಲ್ಲಿಯೇ ಕತ್ತಲು ಎಂಬಂತೆ ಚಿಕ್ಕೋಡಿ ಪುರಸಭೆ ಕಚೇರಿಯಲ್ಲಿಯೇ ಕಳೆದ ನಾಲ್ಕು ದಿನಗಳಿಂದ ನೀರಿಲ್ಲದೇ ಕಚೇರಿಯ ಸಿಬ್ಬಂದಿ, ಸಾರ್ವಜನಿಕರು, ಪೌರಕಾರ್ಮಿಕರು ನೀರಿಗಾಗಿ ಪರದಾಡುವಂತಾಗಿದೆ. ಶೌಚಾಲಯಕ್ಕೂ ನೀರಿಲ್ಲದ ದುಃಸ್ಥಿತಿ ನಿರ್ಮಾಣವಾಗಿದೆ. ಆದರೂ ಇತ್ತ ಯಾರೂ ಗಮನ ಹರಿಸದಿರುವುದು ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. 4.5 ಎಂಎಲ್ಡಿ (ದಿನಕ್ಕೆ ಬೇಕಾಗುವ ಮೆಗಾ ಲೀಟರ್ಸ್) ಸಾಮರ್ಥ್ಯದ ಕಲ್ಲೋಳ ಜಾಕವೆಲ್ನಿಂದ ನೀರೆತ್ತಲು 150 ಎಚ್.ಪಿ ಸಾಮರ್ಥ್ಯದ ಎರಡು ಮೋಟರ್ಗಳಿದ್ದು, 7.8 ಎಂಎಲ್ಡಿ ಸಾಮರ್ಥ್ಯದ ಮಾಂಜರಿ ಜಾಕ್ವೆಲ್ನಿಂದ ನೀರೆತ್ತಲು 225 ಎಚ್.ಪಿ ಸಾಮರ್ಥ್ಯದ ಎರಡು ಮೋಟರ್ಗಳು ಸುಸಜ್ಜಿತವಾಗಿವೆ. ಕೆಲ ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ದಿನಕ್ಕೆ 3-4 ಬಾರಿ ವಿದ್ಯುತ್ ಲೈನ್ ಟ್ರಿಪ್ ಆಗುತ್ತಿರುವುದಿಂದ ಚಿಕ್ಕೋಡಿ ಪಟ್ಟಣಕ್ಕೆ ನೀರು ಪೂರೈಸಲು ವ್ಯತ್ಯಯ ಉಂಟಾಗುತ್ತಿದೆ. ಒಂದೊಮ್ಮೆ ಲೈನ್ ಟ್ರಿಪ್ ಆದರೆ ಪಂಪಸೆಟ್ ಲೋಡ್ ತೆಗೆದುಕೊಳ್ಳಲು ಕನಿಷ್ಠ 3 ತಾಸು ತಗಲುತ್ತದೆ. ದಿನಕ್ಕೆ 3-4 ಬಾರಿ ಹೆಸ್ಕಾಂ ವಿದ್ಯುತ್ ಲೈನ್ ಟ್ರಿಪ್ ಆಗುವುದರಿಂದ ಕನಿಷ್ಠ 12 ತಾಸು ವಿದ್ಯುತ್ ಸರಬರಾಜು ಇಲ್ಲದೇ ಮೋಟರ್ ಚಾಲನೆ ಮಾಡಲು ಆಗುತ್ತಿಲ್ಲ.

ಕೃಷ್ಣಾ ನದಿಯಲ್ಲಿ ನೀರಿದ್ದರೂ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಚಿಕ್ಕೋಡಿ ಪಟ್ಟಣಕ್ಕೆ ನೀರು ಪೂರೈಸಲು ಚಿಕ್ಕೋಡಿ ಪುರಸಭೆ ಅಧಿಕಾರಿಗಳು ಪರದಾಡುತ್ತಿದ್ದಾರೆ. ಪುರಸಭೆ ಕಚೇರಿ ಆವರಣದಲ್ಲಿ 1 ಎಚ್ಪಿ ಸಾಮರ್ಥ್ಯದ ಮೋಟರ್ ದುರಸ್ತಿಗೆ ಬಂದಿದ್ದರಿಂದ ಪುರಸಭೆ ಕಚೇರಿಯಲ್ಲಿ ಹೊರಗಿನಿಂದ ನೀರು ತಂದು ಕುಡಿಯಲು ಬಳಸಲಾಗುತ್ತಿದೆ. ಕಚೇರಿ ಆವರಣದಲ್ಲಿ ದಾನಿಗಳು ಸ್ಥಾಪಿಸಿದ ಶುದ್ದ ಕುಡಿಯುವ ನೀರಿನ ಘಟಕ ಬಂದ್ ಆಗಿ ವರ್ಷಗಳೇ ಕಳೆದಿವೆ. ಪುರಸಭೆ ಕಚೇರಿಯಲ್ಲಿಯೇ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಪಟ್ಟಣದಲ್ಲಿ 150 ಕೊಳವೆಬಾವಿಗಳ ಪೈಕಿ 12 ಕೊಳವೆಬಾವಿಗಳು ನೀರಿಲ್ಲದೇ ಸಂಪೂರ್ಣ ಸ್ಥಗಿತಗೊಂಡಿವೆ. 6 ಕೊಳವೆಬಾವಿಗಳು ದುರಸ್ತಿಯಾಗಬೇಕಿದೆ. 132 ಕೊಳವೆಬಾವಿ ಚಾಲ್ತಿಯಲ್ಲಿದ್ದರೂ ವಿದ್ಯುತ್ ಸಮಸ್ಯೆಯಿಂದ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸಮಸ್ಯೆ ನಿವಾರಿಸಿ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸಬೇಕಾದ ಹೊಣೆಗಾರಿಕೆಯನ್ನು ಅಧಿಕಾರಿಗಳು-ಜನಪ್ರತಿನಿಧಿಗಳು ಮೆರೆಯಬೇಕಿದೆ. ಚಿಕ್ಕೋಡಿಗೆ ನೀರು ಪೂರೈಕೆ ಮಾಡುವ ಕಲ್ಲೋಳ- ಮಾಂಜರಿ ಜಾಕವೆಲ್ಗಳಲ್ಲಿ ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ. ಇದೇ ಕಾರಣ ನೀರಿನ ಅಭಾವ ಉಂಟಾಗಿದೆ. ವೀಣಾ ಕವಟಗಿಮಠ ಅಧ್ಯಕ್ಷೆ ಪುರಸಭೆ ಚಿಕ್ಕೋಡಿ. ಕೃಷ್ಣಾ ನದಿಯಲ್ಲಿ ನೀರಿದ್ದರೂ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಪಟ್ಟಣದ 23 ವಾರ್ಡ್ಗಳಿಗೆ ನೀರು ಪೂರೈಕೆ ಮಾಡುವುದು ತೊಂದರೆಯಾಗುತ್ತಿದೆ .