
ಶಿವಮೊಗ್ಗ: ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿ ಶೀಟರ್ ಕಡೇಕಲ್ ಅಬೀದ್ ಕಾಲಿಗೆ ಭದ್ರಾವತಿಯ ಪೇಪರ್ಟೌನ್ ಠಾಣೆ ಇನ್ಸ್ಪೆಕ್ಟರ್ ನಾಗಮ್ಮ ಗುಂಡು ಹಾರಿಸಿದ್ದಾರೆ.

ಕೊಲೆ ಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಕಡೇಕಲ್ ಅಬೀದ್ನನ್ನು ಪೇಪರ್ ಟೌನ್ ಪೊಲೀಸರು ಹುಡುಕುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ನಾಗಮ್ಮ ನೇತೃತ್ವದ ಪೊಲೀಸರ ತಂಡ ಅಬೀದ್ನನ್ನು ಬಂಧಿಸಲು ತೆರಳಿತ್ತು. ಈ ವೇಳೆ ಅಬೀದ್ ಪೊಲೀಸ್ ಸಿಬ್ಬಂದಿ ಅರುಣ್ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಹಲವು ಬಾರಿ ಪೊಲೀಸರು ಎಚ್ಚರಿಕೆ ನೀಡಿದರೂ ಸ್ಪಂದಿಸದ ಆರೋಪಿಯ ಕಾಲಿಗೆ ಗುಂಡು ಹೊಡೆದು ಕೊನೆಗೆ ಪೊಲೀಸರು ಬಂಧಿಸಿದ್ದಾರೆ, ಎಂದು ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊಲೆ ಯತ್ನ, ದರೋಡೆ ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕಡೇಕಲ್ ಅಬೀದ್ ಪೊಲೀಸರಿಗೆ ಬೇಕಾಗಿದ್ದು, ಗುಂಡೇಟಿನಿಂದ ಗಾಯಗೊಂಡ ಆರೋಪಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.