
ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿದ್ದು, 65 ವರ್ಷದ ಓರ್ವ ಮಹಿಳೆ ಮೃತಪಟ್ಟಿದ್ದಾರೆ. 51 ಜನರಲ್ಲಿ ಕಾಯಿಲೆ ದೃಢಪಟ್ಟಿದೆ. ಕೊಪ್ಪ ಮತ್ತು ಎನ್.ಆರ್.ಪುರ ತಾಲೂಕುಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಜಾಗೃತಿ ಮೂಡಿಸುತ್ತಿದೆ ಮತ್ತು DMPA ತೈಲ ಸಿಂಪಡಿಸುತ್ತಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ.
ರಾಜ್ಯದಲ್ಲಿ ಮಂಗನ ಕಾಯಿಲೆ ಭೀತಿ ಹೆಚ್ಚಾಗಿದ್ದು, ಮಂಗನ ಕಾಯಿಲೆಯಿಂದಾಗಿ ಚಿಕ್ಕಮಗಳೂರಿನಲ್ಲಿ ಸೋಮವಾರ 65 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಎನ್.ಆರ್.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದ ನಿವಾಸಿ ಕಮಲಾ (65 ವರ್ಷ) ಮೃತ ದುರ್ದೈವಿ. ಮೃತ ಕಮಲಾ ಮೇಲ್ಪಾಲ್ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಕಮಲಾ ಅವರು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕಮಲಾ ಮೃತಪಟ್ಟಿದ್ದಾರೆ.

ಮಂಗನ ಕಾಯಿಲೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಕಾಫಿ ತೋಟದ ಕಾರ್ಮಿಕರಿಗೆ ಹೆಚ್ಚಾಗಿ ಕಾಣಿಸುತ್ತಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ 51 ಜನರಿಗೆ ಮಂಗನ ಕಾಯಿಲೆ ದೃಢವಾಗಿದೆ. ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಮಂಗನ ಕಾಯಿಲೆ ಹೆಚ್ಚುತ್ತಿದೆ. ಹೀಗಾಗಿ, ಮಲೆನಾಡು ತಾಲೂಕುಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಮಂಗನ ಕಾಯಿಲೆಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರದಿದೆ.
ಮಂಗನ ಕಾಯಿಲೆ ರೋಗ ತೀವ್ರ ಸ್ವರೂಪ ಪಡೆಯದಂತೆ ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದ್ದು, ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲೂಕುಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಗ್ರಾಮಗಳಲ್ಲಿ DMPA ತೈಲ ಸಿಂಪಡಿಸುತ್ತಿದೆ.
ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ 132 ಜನರಲ್ಲಿ ಕಾಯಿಲೆ ಕಾಣಿಸಿಕೊಂಡು ನಾಲ್ವರನ್ನು ಬಲಿ ಪಡೆದಿತ್ತು. ಕಾಡಂಚಿನ ತಾಲೂಕುಗಳಾದ ಚಿಕ್ಕಮಗಳೂರು, ಕೊಪ್ಪ, ಎನ್ಆರ್ಪುರ, ಶೃಂಗೇರಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ತನ್ನ ರುದ್ರರೂಪ ತಾಳುವ ಮುನ್ನ ಅರೋಗ್ಯ ಇಲಾಖೆ ಇನ್ನಷ್ಟು ಅಲರ್ಟ್ ಆಗಬೇಕಿದೆ.