
ಉಡುಪಿ: ಸಾರ್ವಜನಿಕರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀ ವೇಗದಿಂದ ಬಸ್ ಚಲಾಯಿಸಿಕೊಂಡು ಬರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಉಡುಪಿ ಸಂಚಾರ ಪೊಲೀಸರು ಆರೋಪಿ ಚಾಲಕನನ್ನು ಬಸ್ ಸಹಿತ ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.

3tvkannada.in
ಬಂಧಿತ ಬಸ್ ಚಾಲಕನನ್ನು ದೇವರಾಜ್ ಎಂದು ಗುರುತಿಸಲಾಗಿದೆ. ಈತ ಶ್ರೀ ದುರ್ಗಾಂಬಾ ಖಾಸಗಿ ಬಸ್ನ್ನು ಜೂ.೧೭ರಂದು ಕರಾವಳಿ ಬೈಪಾಸ್ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗದಿಂದ ಚಲಾಯಿಸಿಕೊಂಡು ಬಂದಿದ್ದು, ಈ ವೇಳೆ ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಬಳಿ ನಿಯಂತ್ರಣ ತಪ್ಪಿದ ಬಸ್ ರಸ್ತೆಯ ಮಧ್ಯೆ ತಿರುಗಿ ನಿಂತಿತು.
ಬಳಿಕ ಆರೋಪಿ ಚಾಲಕ ಬಸ್ಸನ್ನು ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಉಡುಪಿ ಕಡೆಗೆ ಹೋಗಿರುವುದಾಗಿ ದೂರಲಾಗಿತ್ತು. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅದರಂತೆ ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ಚಾಲಕ ದೇವರಾಜ್ನನ್ನು ಬಂಧಿಸಿ, ಬಸ್ಸನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.