
ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗದು ರಹಿತ ಟಿಕೆಟ್ ವ್ಯವಸ್ಥೆಯಲ್ಲಿ ಯಶಸ್ಸು ಸಾಧಿಸಿದ್ದು, ಯುಪಿಐ ವಹಿವಾಟು ಶೇ. 42ಕ್ಕೆ ಏರಿಕೆಯಾಗಿದೆ. ಕ್ಯೂಆರ್ ಕೋಡ್ ಆಧಾರಿತ ಯುಪಿಐ ವ್ಯವಸ್ಥೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇ ತಿಂಗಳಲ್ಲಿ ಯುಪಿಐ ಪಾವತಿ ಆದಾಯ 29.5 ಕೋಟಿ ರೂ.ಗೆ ತಲುಪಿದ್ದು, ಜೂನ್ನಲ್ಲಿ ಶೇ. 50ಕ್ಕೆ ಏರುವ ನಿರೀಕ್ಷೆಯಿದೆ. ನಗದು ರಹಿತ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಿ ಮಹತ್ವದ ಮೈಲಿಗಲ್ಲು ಸಾಧಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ವಹಿವಾಟನ್ನು ಶೇ. 42ಕ್ಕೆ ಹೆಚ್ಚಿಸಿಕೊಂಡಿದೆ.

j3tvkannada.in
ಇತ್ತೀಚೆಗಷ್ಟೇ ಬಸ್ಗಳಲ್ಲಿ ಉಂಟಾಗುತ್ತಿದ್ದ ಚಿಲ್ಲರೆ ಸಮಸ್ಯೆಯನ್ನು ಹೋಗಲಾಡಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕ್ಯೂ ಆರ್ ಕೋಡ್ ಆಧಾರಿತ ಯುಪಿಐ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ವ್ಯವಸ್ಥೆಯ ಮೂಲಕ ಟಿಕೆಟ್ ಪಡೆಯುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಯುಪಿಐ ಸೇವೆ ಆರಂಭಿಸುವ ಸಮಯದಲ್ಲಿ ಸಂಸ್ಥೆಯು ಶೇ. 30ರಷ್ಟು ಆದಾಯ ತಲುಪುವ ಗುರಿ ಹೊಂದಿತ್ತು. ಆದರೀಗ ಇದು ಶೇ. 50ರ ಹತ್ತಿರಕ್ಕೆ ಬಂದಿದೆ.
ಕಳೆದ ಜನವರಿಯಲ್ಲಿ 10 ಕೋಟಿ ರೂ.ನಷ್ಟಿದ್ದ ಯುಪಿಐ ಪಾವತಿ ಆದಾಯ, ಮೇನಲ್ಲಿ 29.5 ಕೋಟಿ ರೂ.ಗೆ ಏರಿಕೆ ಕಂಡಿದೆ. ಯುಪಿಐಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳಿರುವ ಕಾರಣಕ್ಕೆ ಜನರು ಕ್ಯೂ ಆರ್ ಕೋಡ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯಲು ಸಿದ್ಧರಿದ್ದರೂ ನಿರ್ವಾಹಕರು ವಿವಿಧ ಕಾರಣವೊಡ್ಡಿ ನಿರಾಕರಿಸುತ್ತಿದ್ದರು. ನಗದು ಪಾವತಿಗೆ ಮಾತ್ರ ಒತ್ತಾಯಿಸುತ್ತಿದ್ದರು. ಹೀಗಾಗಿ, ನಿರ್ವಾಹಕರಿಗೆ ತರಬೇತಿ ನೀಡುವ ಮೂಲಕ ಅವರಲ್ಲಿದ್ದ ಗೊಂದಲಗಳನ್ನು ನಿವಾರಿಸಿ, ಯುಪಿಐ ಆಧಾರಿತ ಟಿಕೆಟ್ ನೀಡುವಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದ್ದರು. ಇದೀಗ ಪ್ರಯಾಣಿಕರು ಮತ್ತು ನಿರ್ವಾಹಕರಿಬ್ಬರೂ ಯುಪಿಐ ಪಾವತಿ ವ್ಯವಸ್ಥೆ ಅಳವಡಿಸಿಕೊಂಡಿದ್ದರಿಂದ ಆದಾಯ ಹೆಚ್ಚಳವಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದರು.