
ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಿ.ಎಂ ‘ಕುಸುಮ- ಸಿ’ ಯೋಜನೆ ಅಡಿ, ಜಿಲ್ಲೆಯಲ್ಲಿ 223.99 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿಯೊಂದಿಗೆ 48 ಸೋಲಾರ್ ಘಟಕ ನಿರ್ಮಿಸಲಾಗುತ್ತಿದ್ದು, ವಿಶೇಷವಾಗಿ ಬೇಸಿಗೆ ಅವಧಿಯಲ್ಲಿ ನೀರಾವರಿ ಪಂಪ್ಸೆಟ್ಗಳ ವಿದ್ಯುತ್ ಬವಣೆಗಳನ್ನು ನೀಗಿಸುವ ನಿರೀಕ್ಷೆಯನ್ನು ಮೂಡಿಸಿದೆ.

j3tvkannada
ನೀರಾವರಿಗಾಗಿ ಜಿಲ್ಲೆಯ ಅಪಾರ ರೈತರು ಪಂಪ್ಸೆಟ್ ಅವಲಂಬಿಸಿದ್ದು, ಪ್ರತಿವರ್ಷ ಬೇಸಿಗೆ ಕಾಲದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ 3.5 ಲಕ್ಷ ಬೋರ್ವೆಲ್ ಹಾಗೂ ಪಂಪ್ಸೆಟ್ಗಳು ಇವೆ. ಪಿ.ಎಂ ಕುಸುಮ್-ಸಿ ಯೋಜನೆಯಡಿ ಮೊದಲ ಹಂತದಲ್ಲಿ 48 ಸೋಲಾರ್ ಘಟಕ ನಿರ್ಮಿಸಿ, 223.99 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಈ ಯೋಜನೆಯಡಿ 61,074 ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಸಲು ಉದ್ದೇಶಿಸಲಾಗಿದೆ.
ಜಿಲ್ಲೆಯ 8 ವಿದ್ಯುತ್ ಸರಬರಾಜು ವಿಭಾಗಗಳ ಪೈಕಿ ಬೆಳಗಾವಿ ನಗರವನ್ನು ಹೊರತುಪಡಿಸಿ ಉಳಿದ 7 ವಿಭಾಗಗಳಾದ ಬೈಲಹೊಂಗಲ, ರಾಯಬಾಗ, ರಾಮದುರ್ಗ, ಬೆಳಗಾವಿ ಗ್ರಾಮೀಣ, ಚಿಕ್ಕೋಡಿ, ಘಟಪ್ರಭಾ, ಅಥಣಿ ಭಾಗದಲ್ಲಿ ಸೋಲಾರ್ ಘಟಕ ನಿರ್ಮಿಸಲಾಗುತ್ತಿದೆ. ಪ್ರತಿ ವಿಭಾಗದ ವ್ಯಾಪ್ತಿಯಲ್ಲಿ 5ರಿಂದ 6 ಘಟಕಗಳನ್ನು ನಿರ್ಮಿಸಲಾಗುತ್ತಿದೆ. 43 ಘಟಕಗಳ ಸ್ಥಾಪನೆಗೆ ಜಿಲ್ಲೆಯ ವಿವಿಧೆಡೆ ಒಟ್ಟು 819 ಎಕರೆ 16 ಗುಂಟೆ ಸರಕಾರಿ ಜಮೀನನ್ನು ಜಿಲ್ಲಾಡಳಿತ ವಿದ್ಯುತ್ ಇಲಾಖೆಗೆ ನೀಡಿದೆ. ಬಾಕಿ ಐದು ಕಡೆ ಸ್ಥಳದ ಕೊರತೆ ಇದ್ದು, ಅಲ್ಲಿ ಖಾಸಗಿಯವರ ಮೂಲಕ ಘಟಕ ಸ್ಥಾಪನೆಗೆ ಅವಕಾಶ ನೀಡಲಾಗಿದೆ.
ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 4 ಎಕರೆ ಭೂಮಿ ಅಗತ್ಯವಿದೆ. ಮಂಜೂರಾದ 48 ಘಟಕಗಳ ಪೈಕಿ ಈಗಾಗಲೇ 25 ಕಡೆ ಘಟಕ ನಿರ್ಮಾಣದ ಕೆಲಸ ನಡೆದಿದೆ. ಈ ಎಲ್ಲಘಟಕಗಳನ್ನು ಕ್ರೆಡೆಲ್ (ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ)ದಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ25 ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಬಾಕಿ 23 ಘಟಕಗಳ ಸ್ಥಾಪನೆಗೂ ಜಾಗ ಲಭ್ಯವಿದ್ದು, ಅವುಗಳನ್ನು ಹಂತ ಹಂತವಾಗಿ ನಿರ್ಮಿಸಿ ಈ ವರ್ಷದಲ್ಲಿ ಮುಕ್ತಾಯಗೊಳಿಸುವ ಮೂಲಕ ಜಿಲ್ಲೆಯ ರೈತರಿಗೆ ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.
ಜಲ ವಿದ್ಯುತ್ ಸ್ಥಾವರಗಳಿಂದ ಬೇಸಿಗೆ ಸಮಯದಲ್ಲಿ ನಿರೀಕ್ಷಿತ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೌರ ವಿದ್ಯುತ್ ಉತ್ಪಾದನೆ ಸಲುವಾಗಿ ಪಿ.ಎಂ ಕುಸುಮ್- ಸಿ ಯೋಜನೆ ಅಡಿ, ವಿದ್ಯುತ್ ಉಪ ಕೇಂದ್ರಗಳ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೌರವಿದ್ಯುತ್ ಉತ್ಪಾದನಾ ಘಟಕ ನಿರ್ಮಿಸಲಾಗುತ್ತಿದೆ. ವಿದ್ಯುತ್ ಅವಲಂಬನೆ ಕಡಿಮೆ ಮಾಡುವುದು ಮತ್ತು ಹೆಚ್ಚುವರಿ ಸೌರಶಕ್ತಿಯನ್ನು ವಿದ್ಯುತ್ ವಿತರಣಾ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸುವ ಗುರಿಯನ್ನೂ ಹೊಂದಲಾಗಿದೆ. ಒಂದು ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ 3.5 ಕೋಟಿ ರೂ.ನಿಂದ 4 ಕೋಟಿ ರೂ. ವೆಚ್ಚ ಆಗುತ್ತದೆ. ಈ ಪೈಕಿ ಕೇಂದ್ರ ಸರ್ಕಾರ 1 ಕೋಟಿ ರೂ. ಸಬ್ಸಿಡಿ ನೀಡುತ್ತದೆ. ಈಗಾಗಲೇ 25 ಕಡೆಗಳಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಕಾಮಗಾರಿ ನಡೆದಿದೆ ಎಂದು ಎಸ್ಇ.ಇ ಪ್ರವೀಣ ಕುಮಾರ ಸಿ. ಸ್ಪಷ್ಟಪಡಿಸಿದ್ದಾರೆ.