
ಮೈಸೂರು: ಮೈಸೂರಿನ ಕುವೆಂಪು ಸಂಚಾರಿ ಗ್ರಂಥಾಲಯವು 2016 ರಲ್ಲಿ ಪ್ರಾರಂಭಗೊಂಡಿದ್ದು 7 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದೆ. ಈ ಬಸ್ 40 ವಾರ್ಡ್ಗಳಲ್ಲಿ ಸಂಚರಿಸುತ್ತಿದ್ದು ಓದುಗರಿಗೆ ಮನೆ ಬಳಿಯೇ ಪುಸ್ತಕ ಓದುವ ಅವಕಾಶ ನೀಡುತ್ತದೆ. ಹೌದು ಈ ರೀತಿ ರಸ್ತೆಯ ಪಕ್ಕದಲ್ಲಿ ನಿಂತಿರುವ ಬಸ್ ಮೈಸೂರಿನ ಓದುಗರಿಗೆ ತೀರ ಚಿರಪರಿಚಿತ. ಏಕೆಂದರೆ ಇದು ನಗರದಲ್ಲಿ ಸಂಚಾರ ಮಾಡುವ ಸಂಚಾರಿ ಗ್ರಂಥಾಲಯ. ಗ್ರಂಥಾಲಯಕ್ಕೆ ತೆರಳಿ ಪುಸ್ತಕವನ್ನು ತೆಗೆದುಕೊಳ್ಳದವರು ತಮ್ಮ ವಾರ್ಡ್ನಲ್ಲಿಯೇ ತಮಗೆ ಇಷ್ಟದ ಪುಸ್ತಕವನ್ನು ತೆಗೆದುಕೊಂಡು ಓದಬಹುದು. ಆ ರೀತಿ ವಿನ್ಯಾಸ ಮಾಡಿರುವ ವಿಶೇಷ ಬಸ್ ಇದಾಗಿದೆ.

j3tvkannada
ಮೈಸೂರಿನಲ್ಲಿರುವ ಕೇಂದ್ರ ಗ್ರಂಥಾಲಯದ ಶತಮಾನೋತ್ಸವದ ಸ್ಮರಣಾರ್ಥವಾಗಿ 2016 ರ ಜನವರಿ 8 ರಂದು ಮೈಸೂರಿನಲ್ಲಿ ನಮ್ಮ ರಾಜ್ಯ ಸರ್ಕಾರವು ಕುವೆಂಪು ಸಂಚಾರಿ ಗ್ರಂಥಾಲಯ ಪ್ರಾರಂಭಿಸಿತು. ಸುಮಾರು 9 ವರ್ಷಗಳಿಂದ ಮೈಸೂರಿನ ಓದುಗರಿಗೆ ಈ ಬಸ್ ಅಚ್ಚುಮೆಚ್ಚಿನ ಬಸ್ ಆಗಿದ್ದು, ತಮ್ಮ ಮನೆಯ ಬಳಿಯೇ ತಮಗೆ ಇಷ್ಟವಾದ ಪುಸ್ತಕವನ್ನು ತೆಗೆದುಕೊಂಡು ಓದುವ ಭಾಗ್ಯ ದೊರಕಿದೆ. ಈ ಕುವೆಂಪು ಸಂಚಾರಿ ಗ್ರಂಥಾಲಯದಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳಿದ್ದು, ಜನಪ್ರಿಯ ಕಾದಂಬರಿಗಳು, ಸಣ್ಣ ಕಥಾ ಸಂಕಲನಗಳು, ಸಾಮಾನ್ಯ ಜ್ಞಾನ, ಆಧ್ಯಾತ್ಮಿಕತೆ, ಪ್ರಚಲಿತ ವಿದ್ಯಮಾನಗಳು, ಮಕ್ಕಳ ಸಾಹಿತ್ಯ ಮತ್ತು ಇತರ ವಿಷಯಗಳ ಕುರಿತಾಗಿರುವ ಪುಸ್ತಕ ಓದುಗರಿಗೆ ಈ ಬಸ್ನಲ್ಲಿ ಸಿಗುತ್ತದೆ.
ಪುಸ್ತಕ ಓದುಗರಿಗೆ ದೂರದ ಗ್ರಂಥಾಲಯಕ್ಕೆ ತೆರಳಿ ಪುಸ್ತಕಗಳನ್ನು ತೆಗೆದುಕೊಂಡು ಓದುವುದಕ್ಕೆ ಸಾಧ್ಯವಾಗದೆ ಅವರು ಪುಸ್ತಕ ಓದುವುದನ್ನು ನಿಲ್ಲಿಸಬಾರದು ಎನ್ನುವ ಕಾರಣಕ್ಕೆ ಈ ಸಂಚಾರಿ ಗ್ರಂಥಾಲಯವನ್ನು ಪ್ರಾರಂಭಿಸಿದರು. ಈ ಗ್ರಂಥಾಲಯ ಪ್ರತಿ ದಿನ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ನಗರದ 40 ವಾರ್ಡ್ಗಳಲ್ಲಿ ಸಂಚಾರ ನಡೆಸುತ್ತದೆ. ವಾರ್ಡ್ಗಳಲ್ಲಿ ಒಂದೊಂದು ಸ್ಥಳಗಳನ್ನು ಗೊತ್ತುಪಡಿಸಿ ಆ ಸ್ಥಳಗಳಲ್ಲಿ 40 ನಿಮಿಷಗಳ ಕಾಲ ಈ ಸಂಚಾರಿ ಗ್ರಂಥಾಲಯ ತನ್ನ ಕೆಲಸವನ್ನು ನಿರ್ವಹಣೆ ಮಾಡುತ್ತದೆ.
ನಂತರ ಮತ್ತೊಂದು ಜಾಗಕ್ಕೆ ತೆರಳುತ್ತದೆ. ಈ ಒಂದು ಸಂಚಾರಿ ಗ್ರಂಥಾಲಯದಲ್ಲಿ 200 ರೂಪಾಯಿಗಳನ್ನು ಪಾವತಿಸುವ ಮೂಲಕ ಜನರು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಂಡ ನಂತರ ಜನರು 3 ಪುಸ್ತಕಗಳನ್ನು ಎರವಲು ಪಡೆದು ಅದನ್ನು 15 ದಿನಗಳವರೆಗೆ ಓದಿ ಮತ್ತೆ ಹಿಂತಿರುಗಿಸಿ ಬೇರೆ ಹೊಸ ಪುಸ್ತಕವನ್ನು ತೆಗೆದುಕೊಂಡು ಹೋಗಬಹುದು. 15 ದಿನ ನಂತರವೂ ಪುಸ್ತಕವನ್ನು ಇಟ್ಟುಕೊಂಡರೆ ಹೆಚ್ಚುವರಿ ದಿನಗಳಿಗೆ ದಂಡವನ್ನು ವಿಧಿಸಲಾಗುವುದು ವಿಶೇಷ.