
ಕೊಡಗು : ರಾಜ್ಯದಲ್ಲಿ ನಾಳೆಯಿಂದ ಮುಂಗಾರು ಚುರುಕು ಪಡೆಯಲಿದ್ದು, ಮುಂದಿನ ಕೆಲ ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 9 ರಿಂದ 13 ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ರಾಜ್ಯದಾದ್ಯಂತ ನಾಳೆಯಿಂದಲೇ ಮುಂಗಾರು ಮಳೆಯ ಅಬ್ಬರ ಶುರುವಾಗಲಿದೆ. ರಾಜ್ಯದ ಕರಾವಳಿ ಭಾಗ, ಉತ್ತರ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಕೆಲವು ಕಡೆ ಸಾಧಾರಣ ಮತ್ತು ಉತ್ತಮ ಮಳೆಯಾಗಲಿದೆ. ಇನ್ನು ಜೂನ್ 11ರಂದು ಬಳ್ಳಾರಿ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಜೂನ್ 12ರಂದು ವಿಜಯನಗರ, ಕೊಡಗು, ದಾವಣಗೆರೆ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯಪುರ, ಕಲಬುರ್ಗಿ, ಬೆಳಗಾವಿ, ಬಾಲಕೋಟೆ ಹಾಗೂ ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಕೂಡಾ ಎಲ್ಲೋ ಅಲರ್ಟ್ ನೀಡಲಾಗಿದೆ.
ಇದು ಮುಂಗಾರು ಮಾರುತಗಳ ಭಾರೀ ಚಲನೆಯ ಪ್ರಭಾವದಿಂದಾಗಿ ತೀವ್ರ ಮಳೆಯನ್ನು ನಿರೀಕ್ಷೆ ಮಾಡಬಹುದಾಗಿದೆ. ಹವಾಮಾನ ಇಲಾಖೆ ಅನಾಹುತಗಳನ್ನು ತಡೆಗಟ್ಟಲು ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇನ್ನು ಮಳೆಯ ಸಂದರ್ಭದಲ್ಲಿ ಹಳ್ಳಗಳನ್ನು ದಾಟಿ ಹೋಗಿ ನೀರು ಬರುವಾಗ ದಾಟುವ ಪ್ರಯತ್ನ ಮಾಡಬಾರದು. ನದಿ ಮತ್ತು ಹಳ್ಳಗಳ ನಡುಗಡ್ಡೆಗಳನ್ನು ಪ್ರವೇಶ ಮಾಡದಂತೆ ಹವಾಮಾನ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಜಂಟಿಯಾಗಿ ಎಚ್ಚರಿಕೆ ನೀಡಿವೆ.

ಜಿಲ್ಲಾವಾರು ಮುನ್ಸೂಚನೆ:
ಜೂನ್ 11: ಬಳ್ಳಾರಿ, ದಾವಣಗೆರೆ, ವಿಜಯನಗರ – ಎಲ್ಲೋ ಅಲರ್ಟ್.
ಜೂನ್ 12: ವಿಜಯನಗರ, ಕೊಡಗು, ದಾವಣಗೆರೆ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯಪುರ, ಕಲಬುರ್ಗಿ, ಬೆಳಗಾವಿ, ಬಾಲಕೋಟೆ, ಕರಾವಳಿಯ ಎಲ್ಲಾ ಜಿಲ್ಲೆಗಳು – ಎಲ್ಲೋ ಅಲರ್ಟ್.
ಸಾರ್ವಜನಿಕರ ಗಮನಕ್ಕೆ:
ರಸ್ತೆ ಅಥವಾ ರಸ್ತೆ ಬದಿಯಲ್ಲಿ ಅಥವಾ ತಗ್ಗು ಪ್ರದೇಶಗಳಲ್ಲಿ ನಿಂತ ನೀರಿನಲ್ಲಿ ವಾಹನ ಚಾಲನೆ ಅಥವಾ ನಡೆದುಕೊಂಡು ಹೋಗಬೇಡಿ. ಮಳೆಯಲ್ಲಿಯೇ ವಾಹನ ಓಡಿಸುವ ವೇಳೆ ಎಚ್ಚರಿಕೆವಹಿಸಿ. ಹಳ್ಳ, ಹೊಳೆ, ಕಾಲುವೆಗಳಿಗೆ ಅತಿದೂರ ಹೋಗದಂತೆ ಎಚ್ಚರಿಕೆ.
ಮಕ್ಕಳು ಹಾಗೂ ಹಿರಿಯರು ಮನೆಯಲ್ಲೇ ಉಳಿಯುವುದು ಉತ್ತಮ. ಹವಾಮಾನ ಇಲಾಖೆ ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾರ್ವಜನಿಕರಿಗೆ ವಿನಂತಿಸಿದೆ. ರೈತರು ಕೂಡಾ ತಮ್ಮ ಕೃಷಿ ಚಟುವಟಿಕೆಗಳಲ್ಲಿ ಅನುಕೂಲವಾಗುವಂತೆ ಈ ಮಾಹಿತಿ ಆಧಾರಿತ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸೂಕ್ತ.

ರಾಜ್ಯದ ಕಾಶ್ಮೀರ ಖ್ಯಾತಿಯ ಕೊಡಗು ಜಿಲ್ಲೆಯಲ್ಲಿ 2018 ರಿಂದ ನಿರಂತರವಾಗಿ 3-4 ವರ್ಷಗಳ ಕಾಲ ಭೂಕುಸಿತವಾಗಿದೆ. ಈ ವರ್ಷವೂ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂಬ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಮಡಿಕೇರಿ ನಗರಸಭೆ ಅಪಾಯಕಾರಿ ಪರಿಸ್ಥಿತಿ ಇರುವ ನಗರದ ಹಲವು ಬಡಾವಣೆಗಳ 200 ಕ್ಕೂ ಹೆಚ್ಚು ಕುಟುಂಬಗಳು ತೀವ್ರ ಮಳೆಯ ಸಂದರ್ಭ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಿ ಎಂದು ನೋಟಿಸ್ ನೀಡಿದೆ. ಅಲ್ಲದೆ ಮಡಿಕೇರಿ ನಗರದ ಹಲವೆಡೆ ಕಾಳಜಿ ಕೇಂದ್ರವನ್ನು ತೆರೆಯಲು ನಗರಸಭೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ನಗರಸಭೆ ನೋಟೀಸ್ ನೀಡಿರುವುದನ್ನು ನೋಡಿದರೆ 2018 ರಂತೆಯೇ ಈ ಬಾರಿಯೂ ಮಡಿಕೇರಿ ನಗರದ ಹಲವು ಬಡಾವಣೆಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿನಾ ಎನ್ನುವ ಅನುಮಾನ ದಟ್ಟವಾಗುತ್ತಿದೆ. ಮಡಿಕೇರಿ ನಗರಸಭೆಯ ವ್ಯಾಪ್ತಿಯ ಇಂದಿರಾ ನಗರ, ಚಾಮುಂಡೇಶ್ವರಿ ನಗರಿ, ಮಂಗಳಾದೇವಿ ನಗರ, ಮಲ್ಲಿಕಾರ್ಜುನ ನಗರ, ತ್ಯಾಗರಾಜ ಕಾಲೋನಿ ಸೇರಿದಂತೆ ಹಲವು ಬಡಾವಣೆಗಳು ಅತೀ ಹೆಚ್ಚಿನ ಬೆಟ್ಟ ಪ್ರದೇಶದಿಂದ ಕೂಡಿವೆ. ಈ ಬಡಾವಣೆಗಳಲ್ಲಿರುವ ಬಹುತೇಕ ಮನೆಗಳು ಅಪಾಯದಲ್ಲಿ ಇವೆ ಎಂದು ಮಡಿಕೇರಿ ನಗರಸಭೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇವರಿಗೆ ಈಗಾಗಲೇ ನೋಟಿಸ್ ನೀಡಿರುವ ಅಧಿಕಾರಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.